ಬೆಂಗಳೂರು : ಶಿವಾಜಿನಗರ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೇಂಟ್ ಮೇರಿಸ್ ಬೆಸಿಲಿಕಾದಲ್ಲಿ ನಡೆದ ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಮಾಡಿದ ವಿನಂತಿಯ ಮೇರೆಗೆ ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣವನ್ನು ಸೇಂಟ್ ಮೇರಿ ಎಂದು ಮರುನಾಮಕರಣ ಮಾಡಲು ಸರ್ಕಾರ ಪರಿಗಣಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣವನ್ನು ಸೇಂಟ್ ಮೇರಿ ಎಂದು ಮರುನಾಮಕರಣ ಮಾಡಿದ ಕರ್ನಾಟಕ ಸರ್ಕಾರದ ಕ್ರಮವನ್ನು ನಾನು ಖಂಡಿಸುತ್ತೇನೆ. ಇದು ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾಡಿದ ಅವಮಾನ ಎಂದು ತಿಳಿಸಿದ್ದಾರೆ.
ನೆಹರೂ ಅವರ ಕಾಲದಿಂದಲೂ ಕಾಂಗ್ರೆಸ್ ಮರಾಠಾ ಯೋಧ ರಾಜನನ್ನು ಅವಮಾನಿಸುವ ಸಂಪ್ರದಾಯವನ್ನು ಮುಂದುವರೆಸಿದೆ. ನೆಹರೂ ಅವರು ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲಿ ಶಿವಾಜಿ ಮಹಾರಾಜರ ವಿರುದ್ಧ ಹೇಳಿಕೆ ನೀಡಿದ್ದಾರೆ. ಧರ್ಮವನ್ನು ಆಧರಿಸಿದ ಮತ್ತು ಮರಾಠಾ ಯೋಧ ರಾಜನ ವಿರುದ್ಧದ ನಿರ್ಧಾರವನ್ನು ಸಿದ್ದರಾಮಯ್ಯ ಮುಂದುವರಿಸದಂತೆ ದೇವರು ಅವರಿಗೆ ಬುದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದು ಫಡ್ನವೀಸ್ ಬೇಸರ ವ್ಯಕ್ತಪಡಿಸಿದ್ದಾರೆ.















