ನವದೆಹಲಿ: ನವೆಂಬರ್ 2024ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಮ್ಯಾಚ್ ಫಿಕ್ಸಿಂಗ್ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ, ಬಿಜೆಪಿಯು ತನ್ನ ಇತಿಹಾಸದಲ್ಲೇ ಅತ್ಯುತ್ತಮ ಸಾಧನೆ ತಲುಪಿದ್ದು, ಏಕಾಂಗಿವಾಗಿ 132 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳ ಪೈಕಿ, 235 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಮಹಾಯುತಿಗೆ ಬಹುಮತ ನೀಡಿದವರು ಜನರೇ ಎಂದು ಬಿಜೆಪಿ ನಾಯಕರು ಹೇಳಿದ್ದು, ಕಾಂಗ್ರೆಸ್ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ.
“ಮಹಾರಾಷ್ಟ್ರದಲ್ಲಿನ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬುಡಮೇಲಾಗಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಐದು ಹಂತದ ಮಾದರಿಗಳನ್ನು ಕಾರ್ಯಗತಗೊಳಿಸಿದೆ” ಎಂದು ಆರೋಪಿಸಿದ್ದಾರೆ. “ಮೊದಲ ಹಂತ ಚುನಾವಣಾ ಆಯೋಗ ನೇಮಕಾತಿಯ ತಿರುಚುವಿಕೆ, ಎರಡನೆ ಹಂತ ಮತಪಟ್ಟಿಗೆ ನಕಲಿ ಮತದಾರರ ಸೇರ್ಪಡೆ, ಮೂರನೆಯ ಹಂತ ಮತದಾನ ಪ್ರಮಾಣದಲ್ಲಿ ಏರಿಕೆ, ನಾಲ್ಕನೆಯ ಹಂತ ಬಿಜೆಪಿ ಗೆಲ್ಲಬೇಕಾದ ಅಗತ್ಯವಿರುವೆಡೆ ನಕಲಿ ಮತದಾನ ನಡೆಸುವುದು ಹಾಗೂ ಐದನೆಯ ಹಂತ ಸಾಕ್ಷ್ಯಾಧಾರಗಳನ್ನು ಬಚ್ಚಿಡುವುದು” ಎಂದು ಅವರು ವಿಸ್ತ್ರತ ಆರೋಪ ಮಾಡಿದ್ದಾರೆ.
ಆದರೆ, ರಾಹುಲ್ ಗಾಂಧಿಯ ಆರೋಪಗಳನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗ, ನಮ್ಮ ಕಾರ್ಯವಿಧಾನ ಸ್ವಾಯತ್ತವಾಗಿಯೇ ಉಳಿದಿದ್ದು, ನಾವು ಸಾಂವಿಧಾನಿಕ ಕಾನೂನುಗಳಿಗೆ ಕಟಿಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದೆ.
ಈ ನಡುವೆ, ರಾಹುಲ್ ಗಾಂಧಿಯ ಆರೋಪಗಳನ್ನು ‘ಅಪಮಾನಕಾರಿ’ ಎಂದು ಟೀಕಿಸಿರುವ ಬಿಜೆಪಿ, “ರಾಷ್ಟ್ರೀಯ ಸಂಸ್ಥೆಗಳಿಗೆ ಕಳಂಕ ಹಚ್ಚುವ ಮೂಲಕ, ರಾಹುಲ್ ಗಾಂಧಿ ಮತ್ತೆ ಅಪಮಾನಕಾರಿ ಚಾಳಿಗೆ ಮರಳಿದ್ದಾರೆ. ಈ ಆರೋಪಗಳ ಕುರಿತು ಚುನಾವಣಾ ಆಯೋಗವು ಪದೇ ಪದೇ ನಿಖರವಾಗಿ ವಿವರಿಸಿದೆ” ಎಂದು ತಿರುಗೇಟು ನೀಡಿದೆ.














