ಚಾಮರಾಜನಗರ: ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧಿಸಲಾಗಿದೆ.
ಮಹಾಶಿವರಾತ್ರಿಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಜಾತ್ರಾಮಹೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತರು ತೆರಳುವುದರಿಂದ ಸಹಜವಾಗಿ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ, ಫೆಬ್ರವರಿ 25 ರಿಂದ ಮಾರ್ಚ್ 1ರವರೆಗೆ ಐದು ದಿನಗಳ ಕಾಲ ಮಹದೇಶ್ವರಬೆಟ್ಟಕ್ಕೆ ದ್ವಿಚಕ್ರ, ಆಟೋ ರಿಕ್ಷಾ, ಗೂಡ್ಸ್ ವಾಹನ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ಕೌದಳ್ಳಿ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕೇವಲ ಕಾರು ಹಾಗೂ ಬಸ್ನಲ್ಲಿ ಮಾತ್ರ ಮಹದೇಶ್ವರ ಬೆಟ್ಟಕ್ಕೆ ತೆರಳಲು ಅವಕಾಶ ನೀಡಲಾಗಿದೆ.
ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದಲೇ (ಫೆ.25) ಮಹಾಶಿವರಾತ್ರಿ ಜಾತ್ರೆ ಆರಂಭವಾಗಿದೆ. ಫೆಬ್ರುವರಿ 26ರ ಮಹಾಶಿವರಾತ್ರಿಯಂದು ಮಲೆಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದ್ದು, ರಾತ್ರಿವಿಡಿ ಜಾಗರಣೆ, ಉತ್ಸವ, ವಿಶೇಷ ಅಭಿಷೇಕ, ಪೂಜೆ-ಪುನಸ್ಕಾರಗಳು ನಡೆಯಲಿವೆ. ಫೆ. 27 ರಂದು ವಿಶೇಷ ಸೇವೆ ಉತ್ಸವಾಧಿಗಳು, 28 ರಂದು ಅಮಾವಾಸ್ಯೆ ಪೂಜೆ ಮತ್ತು ಮಾರ್ಚ್ 1 ರಂದು ಮಹಾ ರಥೋತ್ಸವ ಜರುಗಲಿದೆ.
ಕಾಲ್ನಡಿಗೆಯಲ್ಲಿ ಬರುತ್ತಿರುವ ಮಾದಪ್ಪನ ಅಪಾರ ಭಕ್ತರು
ಕೋಲಾರ, ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಹಲಗೂರು, ಮಳವಳ್ಳಿ, ಮಂಡ್ಯ ಹೀಗೆ ವಿವಿಧ ಕಡೆಯಿಂದ ಕಾಡುಮೇಡು ಸುತ್ತಿ ಭಕ್ತರು ಮಾದಪ್ಪನ ಬೆಟ್ಟದತ್ತ ತೆರಳುತ್ತಿದ್ದಾರೆ. ಜೀವಭಯ ಲೆಕ್ಕಿಸದೆ ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿ ಹರಿಯುವ ಕಾವೇರಿ ನದಿ ದಾಟಿ ತೆರಳುತ್ತಿದ್ದಾರೆ. ನೀರಿನ ಸೆಳೆತ ಇರುವುದರಿಂದ ನದಿಯ ಎರಡೂ ದಡಗಳಿಗೆ ಹಗ್ಗ ಕಟ್ಟಿ ಹಗ್ಗ ಹಿಡಿದು ನದಿ ದಾಟಿ ಸಹಸ್ರಾರು ಭಕ್ತರು ಮಾದಪ್ಪನ ಸನ್ನಿಧಿ ತಲುಪುತ್ತಿದ್ದಾರೆ.
ನದಿ ದಾಟಿ ದಟ್ಟ ಅರಣ್ಯದ ನಡುವೆ ನಡೆದು ಬಂದರೂ ಮಹದೇಶ್ವರನ ಕೃಪೆಯಿಂದಾಗಿ ತಮಗೆ ಯಾವುದೇ ಪ್ರಾಣಿಗಳಿಂದ ತೊಂದರೆಯಾಗಿಲ್ಲ. ಮಾದಪ್ಪನ ದ್ಯಾನ ಮಾಡುತ್ತಾ ಬರುವುದರಿಂದ ಎಷ್ಟೇ ದೂರ ನಡೆದರೂ ಯಾವುದೇ ರೀತಿಯ ದಣಿವೂ ಆಗುತ್ತಿಲ್ಲ ಎಂದು ಭಕ್ತರು ಹೇಳಿದ್ದಾರೆ.
ಕಾಲ್ನಡಿಗೆಯಲ್ಲಿ ದಣಿದು ಬರುವ ಭಕ್ತರಿಗೆ ಹನೂರು ತಾಲೋಕಿನ ವಿವಿಧಡೆ ಆಯಾ ಗ್ರಾಮಸ್ಥರು ಊಟ ತಿಂಡಿ ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ಸೌಲಭ್ಯ ಕಲ್ಪಿಸಿದ್ದಾರೆ. ಭಕ್ತರ ಸೇವೆ ಮಾಡಿದರೆ ಮಾದಪ್ಪನ ಸೇವೆ ಮಾಡಿದಂತೆ ಎಂಬ ಭಾವನೆಯಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ದಾರಿಯುದ್ದಕ್ಕೂ ರೈತರು ಊಟ, ತಿಂಡಿ ಅಷ್ಟೇ ಅಲ್ಲದೇ ಕುಡಿಯುವ ನೀರು, ಮಜ್ಜಿಗೆ, ಪಾನಕ, ತಂಪು ಪಾನೀಯಗಳನ್ನು ನೀಡಿ ಭಕ್ತರ ಧಣಿವಾರಿಸುತ್ತಿದ್ದಾರೆ.















