ಮನೆ ಯೋಗಾಸನ ಚಳಿಗಾಲದಲ್ಲಿ  ಮನೆಯಲ್ಲೇ ಯೋಗಾಸನ ಮಾಡುವ ಮೂಲಕ ಆರೋಗ್ಯ ಕಾಪಾಡಿ

ಚಳಿಗಾಲದಲ್ಲಿ  ಮನೆಯಲ್ಲೇ ಯೋಗಾಸನ ಮಾಡುವ ಮೂಲಕ ಆರೋಗ್ಯ ಕಾಪಾಡಿ

0

ಚಳಿಗಾಲದಲ್ಲಿ ಬೆಳಗ್ಗೆ ಏಳುವುದೇ ಬೇಡ ಎನ್ನಿಸುತ್ತದೆ. ಹೀಗಿರುವಾಗ ವಾಕಿಂಗ್‌, ಜಾಗಿಂಗ್‌ ಹೋಗೋಕೆ ಮನಸ್ಸಾದರೂ ಹೇಗೆ ಬರುತ್ತದೆ. ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾಕೆಂದರೆ ಚಳಿಗಾಲದಲ್ಲಿ ಹೆಚ್ಚಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ, ಮಾತ್ರವಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಹಲವು ಸೋಂಕುಗಳಿಗೆ ಬಲಿಯಾಗಬೇಕಾಗುತ್ತದೆ. ಹೀಗಾಗಿ ಆರೋಗ್ಯ ಕಾಪಾಡಲು ಮನೆಯಲ್ಲೇ ಕೆಲವೊಂದು ಯೋಗಾಸನಗಳನ್ನು ಮಾಡಬಹುದು.

ಸೇತು ಬಂಧಾಸನ

ಬೆನ್ನ ಮೇಲೆ ಮಲಗಿ ನಡುವೆ ಅಂತರವಿರುವಂತೆ ಕಾಲು ಮುಂದೆ ಚಾಚಿ. ನಿಧಾನವಾಗಿ ದೇಹದ ಮೇಲಿನ ಭಾಗವನ್ನು ಮೇಲಕ್ಕೆತ್ತಿ. ಬೆನ್ನ ಕೆಳಗೆ ಕೈ ಇಟ್ಟು ಉಸಿರು ಎಳೆದು ನಿಧಾನವಾಗಿ ಬಿಡುತ್ತ ಬನ್ನಿ. ಶ್ವಾಸಕೋಶವನ್ನು ಆರೋಗ್ಯವಾಗಿಡುವ ಸೇತುಬಂಧಾಸನ ಮಧುಮೇಹ, ಥೈರಾಯ್ಡ, ನಿದ್ರಾಹೀನತೆ, ಸಂಧಿವಾತ, ಅಸ್ತಮಾ ನಿವಾರಣೆಗೆ ಅತ್ಯುತ್ತಮ. ಬೆನ್ನು, ಭುಜ, ಸ್ನಾಯುಗಳಿಗೂ ಒಳ್ಳೆಯದು. ಮನಸ್ಸಿಗೆ ಶಾಂತಿ, ಚರ್ಮ, ಕೂದಲಿನ ಆರೋಗ್ಯಕ್ಕೂ ಅತ್ಯುತ್ತಮ.

ವೃಕ್ಷಾಸನ

ನೇರ ನಿಂತು ಮುಂದಿರುವ ವಸ್ತುವಿನ ಮೇಲೆ ನೇರ ದೃಷ್ಟಿಯನ್ನಿಡಬೇಕು. ನಿಧಾನವಾಗಿ ಉಸಿರಾಡುತ್ತ ಎಡ ಕಾಲನ್ನು ಮೇಲೆತ್ತಿ ಬಲ ತೊಡೆಯ ಮೇಲಿಡಿ. ಕೈಗಳನ್ನು ನಿಧಾನವಾಗಿ ತಲೆಯಿಂದ ಮೇಲೆತ್ತಿ ಕೈ ಮುಗಿಯುವ ರೀತಿಯಲ್ಲಿ ಜೋಡಿಸಿ. ಉಸಿರು ತೆಗೆದುಕೊಂಡು ಕೆಲವು ಸೆಕೆಂಡ್‌ ಹಾಗೇ ಇದ್ದು ಸಾಮಾನ್ಯ ಭಂಗಿಗೆ ಬನ್ನಿ. ಈ ಆಸನವು ಏಕಾಗ್ರತೆ ಹೆಚ್ಚಿಸಲು, ದೇಹ, ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು, ಕಾಲುಗಳಿಗೆ ಬಲ ತುಂಬಲು ಸಹಕಾರಿ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಚಕ್ರಾಸನ

ಕೈ ಮತ್ತು ಮೊಣ ಕಾಲನ್ನು ನೆಲದ ಮೇಲೆ ಇಡಿ. ಮೊಣಕಾಲುಗಳು ಸೊಂಟಕ್ಕೆ ಸಮಾನಾಂತರವಾಗಿರಬೇಕು. ಮೊಣಕೈ ಭುಜದ ನೇರಕ್ಕಿರಲಿ. ಉಸಿರಾಡುತ್ತ ತಲೆ, ಎದೆಯನ್ನು ಬಾಣದಂತೆ ಮೇಲೆತ್ತಿ. ಈ ಭಂಗಿಯಿಂದ ಬೆನ್ನು ಹುರಿ ಆರೋಗ್ಯವಾಗಿರುತ್ತದೆ. ಕುತ್ತಿಗೆ, ಬೆನ್ನಿನ ಭಾಗದ ನೋವು ಶಮನವಾಗುವುದು. ಕಿಡ್ನಿಗೂ ಇದು ಒಳ್ಳೆಯದು. ಒತ್ತಡ ನಿವಾರಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ.

ಉಷ್ಟ್ರಾಸನ

ಮೊಣಕಾಲಿನಲ್ಲಿ ನಿಂತು ಸೊಂಟದ ಮೇಲೆ ಕೈಗಳನ್ನಿಡಿ. ಬೆರಳುಗಳು ಕೆಳಮುಖವಾಗಿ ಬೆನ್ನಿಗೆ ಬೆಂಬಲವಾಗಿರಲಿ. ನಿಧಾನವಾಗಿ ಉಸಿರಾಡುತ್ತ ಮೊಣಕೈಯಿಂದ ಮೇಲಿನ ಭಾಗವನ್ನು ಹಿಂದೆ ತೆಗೆದುಕೊಂಡು ಹೋಗಿ ಹಿಂಗಾಲು ಹಿಡಿಯಿರಿ. ಕುತ್ತಿಗೆಯು ಹಿಂದಕ್ಕೆ ಬಾಗಲಿ. ಅಸ್ತಮಾ, ಥೈರಾಯ್ಡ, ಗರ್ಭಕೋಶ ಸಮಸ್ಯೆ ಉಳ್ಳವರಿಗೆ ಅತ್ಯುತ್ತಮ ಆಸನ. ಇದು ಹೊಟ್ಟೆಯ ಕೊಬ್ಬು ಕಡಿಮೆ ಮಾಡಿ ಒತ್ತಡ, ಆತಂಕ, ಖನ್ನತೆಯನ್ನು ದೂರ ಮಾಡುತ್ತದೆ.

ಅಧೋಮುಖ ಶ್ವಾನಾಸನ

ನೆಲದಲ್ಲಿ ಅಂಗೈ ಮತ್ತು ಮೊಣಕಾಲು ಬಲದಿಂದ ನಿಂತು ದೇಹವನ್ನು ಮೇಲೆತ್ತಿ. ಕಣ್ಣುಗಳು ನಾಭಿಯನ್ನು ನೋಡುತ್ತಿರಬೇಕು. ದೇಹಕ್ಕೆ ಸಂಪೂರ್ಣ ಶಕ್ತಿ ತುಂಬುವ ಈ ಆಸನ ಭುಜ, ಕೈ ನೋವು ಶಮನ ಮಾಡುವುದು. ತಲೆನೋವು, ನಿದ್ರಾಹೀನತೆ, ನಿಶ್ಯಕ್ತಿಯನ್ನು ಹೋಗಲಾಡಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.