ಧಾರ್ಮಿಕ ಸಭೆಗಳಲ್ಲಿ ಮತಾಂತರಕ್ಕೆ ತಡೆ ಒಡ್ಡದಿದ್ದರೆ ಮುಂದೊಂದು ದಿನ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ ಎಂದು ಅಲಾಹಾಬಾದ್ ಹೈಕೋರ್ಟ್ ಸೋಮವಾರ ಹೇಳಿದೆ .
ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆ ಕಾಯಿದೆ, 2021ರ ಅಡಿಯಲ್ಲಿ ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸುವ ವೇಳೆ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್ ಈ ವಿಚಾರ ತಿಳಿಸಿದರು.
ದಿಲ್ಲಿಯಲ್ಲಿ ನಡೆಯುತ್ತಿದ್ದ “ಕ್ಷೇಮ” ಕೂಟಕ್ಕೆ ಮಾಹಿತಿದಾರನ ಸಹೋದರನನ್ನು ಆತನ ಗ್ರಾಮದಿಂದ ಕರೆದೊಯ್ಯಲಾಗಿತ್ತು. ಅವನೊಂದಿಗೆ, ಹಳ್ಳಿಯ ಅನೇಕ ವ್ಯಕ್ತಿಗಳನ್ನು ಕ್ರೈಸ್ತ ಧರ್ಮಕ್ಕೆ ಪರಿವರ್ತಿಸಲು ಕರೆದೊಯ್ಯಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂತಹ ಆಚರಣೆ ಮುಂದುವರೆಸಲು ಅವಕಾಶ ನೀಡಿದರೆ ಮುಂದೊಂದು ದಿನ ಬಹುಸಂಖ್ಯಾತರೆಲ್ಲಾ ಅಲ್ಪಸಂಖ್ಯಾತರಾಗುತ್ತಾರೆ. ಧರ್ಮ ಬದಲಾಯಿಸುವ ಇಂತಹ ಧಾರ್ಮಿಕ ಸಭೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನದ 25ನೇ ವಿಧಿ ಜನರು ತಮ್ಮಿಚ್ಛೆಯ ಧರ್ಮ ಪಾಲಿಸಲು ಅನುಮತಿಸುತ್ತದೆ ಆದರೆ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. “ಪ್ರಚಾರ” ಎಂಬ ಪದ ಧರ್ಮ ಪ್ರಚಾರವನ್ನು ಹೇಳುತ್ತದೆ ಆದರೆ ಯಾವುದೇ ವ್ಯಕ್ತಿಯನ್ನು ಆತನ ಧರ್ಮದಿಂದ ಇನ್ನೊಂದು ಧರ್ಮಕ್ಕೆ ಪರಿವರ್ತಿಸುವಂತೆ ಹೇಳುವುದಿಲ್ಲ” ಎಂದು ಅದು ನುಡಿದಿದೆ.
ಉತ್ತರ ಪ್ರದೇಶದೆಲ್ಲೆಡೆ ಎಸ್ಸಿ/ಎಸ್ಟಿ ಮತ್ತು ಆರ್ಥಿಕವಾಗಿ ಬಡವರಾಗಿರುವವರನ್ನು ಅತಿ ವೇಗವಾಗಿ ಕ್ರೈಸ್ತ ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಪ್ರಕರಣದ ಆರೋಪಿಗೆ ಅದು ಜಾಮೀನು ನಿರಾಕರಿಸಿತು.