ಮನೆ ಸ್ಥಳೀಯ ಪೋಷಕರ ಕನಸು ನನಸು ಮಾಡಿ: ಡಾ.ಕೃಷ್ಣೇಗೌಡ ಕರೆ

ಪೋಷಕರ ಕನಸು ನನಸು ಮಾಡಿ: ಡಾ.ಕೃಷ್ಣೇಗೌಡ ಕರೆ

0

ಮೈಸೂರು: ಮೊದಲೆಲ್ಲಾ ಪೋಷಕರು ಭವಿಷ್ಯದಲ್ಲಿ ಮಕ್ಕಳು ತಮ್ಮನ್ನು ಸಾಕಬೇಕು ಎಂದು ಬಯಸುತ್ತಿದ್ದರು. ಆದರೆ ಈಗ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು. ಬುದ್ಧಿವಂತರಾಗಬೇಕು. ತಮ್ಮ ಕಾಲ ಮೇಲೆ ತಾವು ನಿಂತು ನೆಮ್ಮದಿಯಿಂದ ಬಾಳಬೇಕು ಎಂದು ಬಯಸುತ್ತಾರೆ ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ಕೃಷ್ಣೇಗೌಡ ತಿಳಿಸಿದರು.

ಬನ್ನಿಮಂಟಪದ ಮೈಸೂರು ಲಯನ್ಸ್ ಸ್ಕೂಲ್ ನ 42ನೇ ವಾರ್ಷಿಕೋತ್ಸವ ಹಾಗೂ ಕ್ಲಬ್ ನಾ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಬೇಕು. ಕೆಟ್ಟವರ ಸಹವಾಸ ಮಾಡಬಾರದು. ಯಾರೂ ಕದಿಯಲಾಗದ ಆಸ್ತಿಯಾದ ವಿದ್ಯೆಯನ್ನು ಪಡೆದು, ತಂದೆ- ತಾಯಿಯ ಕನಸನ್ನು ನನಸು ಮಾಡಬೇಕು ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾದ ಲಯನ್ ಸೇವಾ ಮನೋಭಾವದಿಂದ ಯಾವುದೇ ವಂತಿಗೆ ಇಲ್ಲದೇ ಕಡಿಮೆ ಶುಲ್ಕ ಪಡೆದು ಈ ಶಾಲೆಯನ್ನು ನಡೆಸುತ್ತಿದೆ. ಇದರ ಸದುಪಯೋಗಪಡೆದು ಮುಂದೆ ಬರಬೇಕು ಎಂದು ಅವರು ಹೇಳಿದರು.

ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದು ಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಲಯನ್ಸ್ ಸ್ಕೂಲ್ ಚೇರ್ಮನ್ ಶಿವಕುಮಾರ್ ಮಾತನಾಡಿ, ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್ ಸೇರಿದಂತೆ ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಸಿಕೊಂಡರೆ ನಮಗೆ ಸಂತೋಷವಾಗುತ್ತದೆ. ರಾಷ್ಟ್ರಪತಿಯಾಗಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಮಾದರಿಯಾಗಿಟ್ಟುಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದರು.

ಲಯನ್ಸ್ನ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷೆ ಬಿ. ಭಾರತಿ ಅತಿಥಿಯಾಗಿದ್ದರು. ಜಿಲ್ಲಾ ಲಯನ್ಸ್ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಕಾಂತರಾಜು ವೇದಿಕೆಯಲ್ಲಿದ್ದರು.

ಮೈಸೂರು ಲಯನ್ಸ್ ಸ್ಕೂಲ್ ಕಾರ್ಯದರ್ಶಿ ಸಿ. ಮೋಹನಕುಮಾರ್ ಸ್ವಾಗತಿಸಿದರು. ಖಜಾಂಚಿ ಜೆ. ಲೋಕೇಶ್ ವಂದಿಸಿದರು. ಮುಖ್ಯ ಶಿಕ್ಷಕಿ ಹೇಮಾವತಿ ಶಾಲಾ ವರದಿ ಓದಿದರು.

ಲಯನ್ಸ್ ಜಿಲ್ಲಾ ಮಾಜಿ ಗೌರ್ನರ್ ಡಾ.ಡಿ. ಪ್ರಭಾಮಂಡಲ್, ಹಿರಿಯ ಸದಸ್ಯರಾದ ಮತಿದೇವಕುಮಾರ್, ಪಿ.ಎಸ್. ಚಂದ್ರಶೇಖರ್, ಗಿರೀಶ್, ಶಿವಣ್ಣ, ಪ್ರತಿಮಾ ರಮೇಶ್, ಗೀತಾ, ಉಪಾಧ್ಯಕ್ಷ ವಿರೂಪಾಕ್ಷ, ಸಹ ಕಾರ್ಯದರ್ಶಿ ಪಿ. ರಮೇಶ್ ಮೊದಲಾದವರು ಇದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ 150ಕ್ಕೂ ಹೆಚ್ಚು ಬಹುಮಾನಗಳನ್ನು ವಿತರಿಸಲಾಯಿತು. ಆಡಳಿತ ಮಂಡಳಿಯ ಪರವಾಗಿ ಎಲ್ಲಾ ಶಿಕ್ಷಕರಿಗೂ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ಎಲ್ ಕೆಜಿಯಿಂದ ಹಿಡಿದು ಎಸ್ಸೆಸ್ಸೆಲ್ಸಿವರೆಗೆ ಅತಿ ಹೆಚ್ಚು ಅಂಕಗಳನ್ನು ಪಡೆದ ತಲಾ ಓರ್ವ ವಿದ್ಯಾರ್ಥಿಗೆ ಉನ್ನತಿ ಲೋಕೇಶ್ ಅವರು ತಮ್ಮ ತಾಯಿಯ ಸ್ಮರಣಾರ್ಥ ಬಹುಮಾನಗಳನ್ನು ನೀಡಿದ್ದು ವಿಶೇಷ. ಹಲವು ಹಿರಿಯ ಸದಸ್ಯರು ಶಾಲೆಗೆ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.

ಕೊನೆಯಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು, ನೆರೆದಿದ್ದವರನ್ನು ರಂಜಿಸಿದರು.