ದಾವಣಗೆರೆ: ಲೋಕಸಭೆ ಚುನಾವಣೆ ಬರುವ ಮೊದಲು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಿ. ವಿಳಂಬವಾದರೇ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸರ್ಕಾರಕ್ಕೆ ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 10ರಂದು ದಾವಣಗೆರೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48 ರ ಬಾಡಾ ಕ್ರಾಸ್ ಬಳಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕಳೆದ ಆರು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಸಹ ಸೂಕ್ತ ಕ್ರಮಕೈಗೊಳ್ಳಲಿಲ್ಲ. ಈಗ ಸಿದ್ದರಾಮಯ್ಯ ಸರ್ಕಾರ ಬಂದಿದೆ. ಸಿದ್ದರಾಮಯ್ಯ ಸರ್ಕಾರ ಬಂದ ಬಳಿಕ ನಮಗೆ ಮೀಸಲಾತಿ ಸಿಗುವುದು ಕಷ್ಟದ ಕೆಲಸ. ಮತ್ತೆ ಹೋರಾಟ ಆರಂಭಿಸಿ ಎಂದು ಪಂಚನಸಾಲಿ ಸಮಾಜದ ಮುಖಂಡರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಹೆದ್ದಾರಿಗಳಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ನಡೆದಿದೆ. ಕನಿಷ್ಟ ಐದು ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದು ತಿಳಿಸಿದರು.
ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ವಿನಯ್ ಕುಲಕರ್ಣಿ, ಅರವಿಂದ ಬೆಲ್ಲದ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸದ್ಯಕ್ಕೆ 2ಎ ಮೀಸಲಾತಿ ತಡವಾದರೂ ಸರಿ. ಎಲ್ಲ ಲಿಂಗಾಯತರಿಗೆ ಓಬಿಸಿ ಪಟ್ಟಿಗೆ ಸೇರ್ಪಡೆಗೆ ಶಿಪಾರಸ್ಸು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದರು.
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ರಾಜ್ಯದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಹೇಳಿರುವುದು ಸತ್ಯ. ಶಾಮನೂರ ಹೇಳಿಕೆಗೆ ನಮ್ಮ ಬೆಂಬಲವಿದೆ ಎಂದು ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಹೆಚ್. ಎಸ್. ಶಿವಶಂಕರ ಹೇಳಿದರು.
ವೀರಶೈವ ಮಹಾಸಭೆಯ ಅಧ್ಯಕ್ಷರಾದ ಶಾಮನೂರು ಶಿವಶಂಕರ ನೈಜ ಸಮಸ್ಯೆಯನ್ನು ಹೇಳಿದ್ದಾರೆ. ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನ ಮಾನ ಸಿಗುತ್ತಿಲ್ಲ. ಈ ಬಗ್ಗೆ ಶಾಮನೂರ ಅವರು ಇನ್ನಷ್ಟು ಗುಡುಗಬೇಕು. ಇಂತಹ ಕೆಲಸವನ್ನು ಈ ಹಿಂದೆಯೇ ಶಾಮನೂರ ಮಾಡಿದ್ದರೆ. ಅವರು ಸಿಎಂ ಆಗುತ್ತಿದ್ದರು ಎಂದರು.