ಮೈಸೂರು: ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನವನ್ನು ತಿದ್ದುಪಡಿ ಮಾಡುವ ಹಾಗೂ ವಿರೋಧಿಸುವವರನ್ನು ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಿ ಎಂದು ಶಾಸಕ ಡಾ. ಯತಿಂದ್ರ ಸಿದ್ದರಾಮಯ್ಯನವರು ಜೈ ಭೀಮ್ ಯುವಕರ ಸಂಘದ ಮುಖಂಡರುಗಳಿಗೆ ಕರೆ ನೀಡಿದರು.
ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಗಡೂರು ಗ್ರಾಮದಲ್ಲಿ ಸಂವಿಧಾನ ದಿನದ ಅಂಗವಾಗಿ ಗ್ರಾಮದ ಜೈ ಭೀಮ್ ಯುವಕರ ಸಂಘದವರು ಏರ್ಪಡಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ಆಟದಲ್ಲಿ ಜಯಗಳಿಸಿದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸಂವಿಧಾನದ ದಿನದ ಅಂಗವಾಗಿ ಗ್ರಾಮದ ಯುವಕರು ಇಂತಹ ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆ ಮಾಡಿ ಸುತ್ತಮುತ್ತಲ ಗ್ರಾಮಗಳ ಯುವಕರು ಬಾಂಧವ್ಯ ಬೆಸೆಯಲು ಈ ಆಟವು ಪ್ರಮುಖ ಪಾತ್ರ ವಹಿಸುವುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕ್ರೀಡೆ ಯುವಕರಿಗೆ ಬಹಳ ಮುಖ್ಯವಾಗಿದ್ದು, ದೇಹ ಆರೋಗ್ಯ ಹಾಗೂ ಉತ್ತಮ ಸ್ನೇಹ ಬಾಂಧವ್ಯ ಬೆಸೆಯುವ ಆಟವಾಗಿದೆ. ಆಟದಲ್ಲಿ ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಎಲ್ಲರೂ ಸಮಾನಚಿತವಾಗಿ ಕಾಣಬೇಕು ಎಂದು ಸಲಹೆ ನೀಡಿದರು.
ಸಂವಿಧಾನದ ಅಡಿಯಲ್ಲಿ ಅಧಿಕಾರಕ್ಕೆ ಬಂದ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನು ತಿದ್ದುಪಡಿ ಮಾಡುವ ಹುನ್ನಾರ ನಡೆಯುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ಅಂತಹ ವಿಚಾರ. ಆದ್ದರಿಂದ ಸಂವಿಧಾನವನ್ನು ತಿದ್ದುಪಡಿ ಮಾಡುವ ಹಾಗೂ ವಿರೋಧಿಸುವ ಪಟ್ಟಭದ್ರ ಹಿತ ಶಕ್ತಿಗಳು ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಸಿ ಬಸವರಾಜು, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಆರ್ ಮಹದೇವು, ಗ್ರಾಮ ಪಂಚಾಯತಿ ಅಧ್ಯಕ್ಷ ಸರಸ್ವತಿ ಗಾರ್ಡನ್ ಮಹೇಶ್, ಕಾಂಗ್ರೆಸ್ ಮುಖಂಡರಾದ ಶಾಂತಮ್ಮ, ಬುಲೆಟ್ ಮಹಾದೇವ, ಶಿವರಾಮು, ಬಾಲರಾಜು, ಪುಟ್ಟಣ್ಣ, ರಾಜಣ್ಣ, ನಾಗರಾಜು, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ ಗುರು ಮಲ್ಲೇಶ ಚಿನ್ನಂಬಳ್ಳಿ ರಾಜು ಉಪಸ್ಥಿತರಿದ್ದರು.