ಮನೆ ದೇವಸ್ಥಾನ ಮಲೆ ಮಹದೇಶ್ವರ ಬೆಟ್ಟ: 77 ರಮಣೀಯ ಬೆಟ್ಟಗಳ ಸಾಲಿನ ಪುಣ್ಯ ಕ್ಷೇತ್ರ      

ಮಲೆ ಮಹದೇಶ್ವರ ಬೆಟ್ಟ: 77 ರಮಣೀಯ ಬೆಟ್ಟಗಳ ಸಾಲಿನ ಪುಣ್ಯ ಕ್ಷೇತ್ರ      

0

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಪೂರ್ವಘಟ್ಟದ ಪ್ರಕೃತಿ ರಮಣೀಯವಾದ ಬೆಟ್ಟಗಳ ಸಾಲಿನಲ್ಲಿ ರಮ್ಯ ವನಸಿರಿಯ ಮಧ್ಯೆ ಇರುವ ಪವಿತ್ರ ಪುಣ್ಯ ಕ್ಷೇತ್ರ ಮಹದೇಶ್ವರ ಬೆಟ್ಟ.

ಹಚ್ಚಹಸಿರಿನ ಕಾನನ ಪ್ರದೇಶದಲ್ಲಿರುವ ಎಪ್ಪತ್ತೇಳು ಬೆಟ್ಟಗಳ ಸಾಲಿನಲ್ಲಿ ವಿಶಾಲವಾದ ಪ್ರಧಾನ ಬೆಟ್ಟದ ಮೇಲೆ  ಮಹದೇಶ್ವರ ಸ್ವಾಮಿ ತಪವನ್ನಾಚರಿಸಿ ಇಲ್ಲಿಯೇ ನೆಲೆಸಿದರು ಎಂದು ಹೇಳಲಾಗುತ್ತದೆ.

15ನೇ ಶತಮಾನದಲ್ಲಿ ಜೀವಿಸಿದ್ದರೆಂದೂ, ಜನರ ಸಂಕಷ್ಟಗಳನ್ನು ತಮ್ಮ ಅಲೌಕಿಕಶಕ್ತಿಯಿಂದ ಪರಿಹರಿಸಿದ ದೈವಾಂಶ ಸಂಭೂತರೆಂದೂ ಹೇಳಲಾಗುವ ಜನಪದರ ಆರಾಧ್ಯದೈವ ಮಹದೇಶ್ವರರಿಗೆ ಇಲ್ಲಿ  ಬೃಹತ್ ಭವ್ಯ ದೇವಾಲಯ ನಿರ್ಮಿಸಲಾಗಿದೆ. ಬೆಟ್ಟದ ಮೇಲೆ ಮಹದೇಶ್ವರ ದೇವಾಲಯವಿರುವ ಕಾರಣ ಈ ಪ್ರದೇಶಕ್ಕೆ ಮಲೆ ಮಹದೇಶ್ವರ ಎಂದೇ ಹೆಸರು ಬಂದಿದೆ. ಮಲೆ ಎಂದರೆ ಬೆಟ್ಟ.

ಬೆಟ್ಟದ ಮೇಲಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ಭವ್ಯ ದೇವಾಲಯಕ್ಕೆ ಎರಡು ಗೋಪುರಗಳಿವೆ. ದೇವಾಲಯದ ಪ್ರವೇಶಕ್ಕೆ ಮೂರು ಅಂತಸ್ತಿನ ಗೋಪುರವಿದ್ದು, ಮೇಲ್ಭಾಗದಲ್ಲಿ ಪಂಚ ಕಳಶವಿದೆ. ಗೋಪುರದ ವಿವಿಧ ಹಂತಗಳಲ್ಲಿ ಹನುಮಂತ, ಗರುಡ, ರಾಕ್ಷಸ ಗಣಗಳು, ಗಣಪತಿ, ಸುಬ್ರಹ್ಮಣ್ಯ, ಸಿಂಹವಾಹಿನಿಯಾದ ದುರ್ಗೆ, ದ್ವಾರಪಾಲಕರು, ಯಮನನ್ನೇ ಕೊಲ್ಲಲು ಮುಂದಾದ ಮಾರ್ಕಾಂಡೇಯ ಹಾಗೂ ಮುಖ್ಯವಾಗಿ ಹುಲಿಯ ಮೇಲೆ ಕುಳಿತ ಮಹದೇಶ್ವರರು ಇತ್ಯಾದಿ ಗಾರೆಯ ಸುಂದರ ಶಿಲ್ಪಗಳಿವೆ.

ಇನ್ನು ಏಳು ಅಂತಸ್ತಿನ ಪ್ರಧಾನ ಗೋಪುರದಲ್ಲಿ ಈಶ್ವರನ ವಿವಿಧ ಸ್ವರೂಪಗಳಿವೆ. ಜೊತೆಗೆ ದ್ವಾರಪಾಲಕರು, ಪಾರ್ವತಿ, ಸರಸ್ವತಿ, ಲಕ್ಷ್ಮಿ ಮೊದಲಾದ ಗಾರೆಯ ಶಿಲ್ಪಗಳೂ ಇವೆ. ದ್ವಾರಬಂಧದ ಮುಂಭಾಗದಲ್ಲಿ ಬೃಹತ್ ಗರುಡಗಂಬವಿದೆ.

ದೇವಾಲಯದ ಪ್ರದಕ್ಷಿಣ ಪಥದಲ್ಲಿ ಹುಲಿ ವಾಹನ, ಗಜ ವಾಹನ, ಕಾಮಧೇನು, ಹಂಸವಾಹನವೇ ಮೊದಲಾದ ವಾಹನಗಳು ಹಾಗೂ ಪರಿವಾರ ದೇವತೆಗಳಿವೆ. ಪ್ರಧಾನ ಗರ್ಭಗೃಹದಲ್ಲಿ ಮಹದೇಶ್ವರರ ಲಿಂಗವಿದ್ದು, ಬೆಳ್ಳಿಯ ಕವಚವನ್ನು ತೊಡಿಸಲಾಗುತ್ತದೆ. ದೇವಾಲಯದಲ್ಲಿ ಸ್ವಚ್ಛತೆಯನ್ನು ಕಾಪಾಡಲಾಗಿದೆ. 

ಮಹದೇಶ್ವರರ ಬೆಟ್ಟಕ್ಕೆ ಹೋಗಲು ಸರ್ಪದಾರಿ. ಬಸವನದಾರಿ ಎಂಬ ಎರಡು ಮಾರ್ಗಗಳಿವೆ. ಹಿಂದೆ ಇಲ್ಲಿಗೆ ಜನ ನಡೆದೇ ಬರುತ್ತಿದ್ದರು. ಈಗಲೂ ಹರಕೆ ಹೊತ್ತವರು ನಡೆದು ಬರುವ ಸಂಪ್ರದಾಯವಿದೆ. ಈಗ  ದೇವಾಲಯ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ದೇವಾಲಯದವರೆಗೂ ಬರಲು ಡಾಂಬರು ರಸ್ತೆಯಿದೆ. ಯಾತ್ರಿಕರು ತಂಗಲು ಸಕಲ ಸೌಲಭ್ಯಗಳಿರುವ ಅತಿಥಿಗೃಹ ಹಾಗೂ ಛತ್ರಗಳೂ  ಇವೆ.

ನೀಲಿ ಹೊದಿಕೆ ತೊಟ್ಟಂತೆ ದೂರ ದೂರದವರೆಗೂ ಗೋಚರಿಸುವ ಬೆಟ್ಟಗಳ ಶ್ರೇಣಿಯಲ್ಲಿರುವ  ಮಹದೇಶ್ವರ ಬೆಟ್ಟದ ಸುತ್ತ, ಆನೆಮಲೆ,  ಜೇನುಮಲೆ,   ಕಾನುಮಲೆ,   ಪಷ್ಪಮಲೆ,  ಧವಳಮಲೆ,   ಪೊನ್ನಾಚಿಮಲೆ,   ಕೊಂಗುಮಲೆ  ಮೊದಲಾಗಿ 77  ಬೆಟ್ಟಗಳಿವೆ. ಬಹುತೇಕ ಬೆಟ್ಟಗಳು ತಮಿಳುನಾಡಿನ ಗಡಿಯಲ್ಲಿ ಇರುವ ಕಾರಣ ಈ ಬೆಟ್ಟಗಳಿಗೆ ತಮಿಳು ಹೆಸರುಗಳು ಅಂಟಿಕೊಂಡಿವೆ.

ಗಿರಿಜನರ, ಸೋಲಿಗರ ಹಾಗೂ ಸುತ್ತಮುತ್ತಲ ಪ್ರದೇಶದ ಹಲವು ವಂಶಗಳವರು ಮಹದೇಶ್ವರರನ್ನು ತಮ್ಮ ಕುಲದೈವವಾಗಿ ಆರಾಧಿಸುತ್ತಾರೆ. ಮಹದೇಶ್ವರರ ಪವಾಡಗಳ ಬಗ್ಗೆ ಈ ಪ್ರದೇಶದಲ್ಲಷ್ಟೇ ಅಲ್ಲ, ನೆರೆಯ ರಾಜ್ಯಗಳಲ್ಲೂ ಹಲವು ಜನಜನಿತ ಕಥೆಗಳಿವೆ. 

15ನೇ ಶತಮಾನದಲ್ಲಿ ಲೋಕಕಲ್ಯಾಣಾರ್ಥ  ದೇಶ ಸಂಚಾರ ಮಾಡಿ, ಹಲವರ ಸಂಕಷ್ಟ ನಿವಾರಿಸಿದ ಪವಾಡಪುರುಷ  ಮಹದೇಶ್ವರರ ಬಗ್ಗೆ ಭಕ್ತಿ ಗೌರವವಿದೆ. ಮಹದೇಶ್ವರರು ಹುಲಿಯ ಮೇಲೆ ಸವಾರಿ ಮಾಡುತ್ತಿದ್ದರು ಎಂಬುದು ಜನರ ನಂಬಿಕೆ. ಹೀಗಾಗಿಯೇ ಚಾಮರಾಜನಗರ ಜಿಲ್ಲೆಯ ಬಹುತೇಕರ ಮನೆಗಳಲ್ಲಿ  ಹಾಗೂ ಭಕ್ತರ ಮನೆಗಳಲ್ಲಿ ಹುಲಿಯ ಮೇಲೆ ಕುಳಿತ ಮಹದೇಶ್ವರರ ಚಿತ್ರಪಟವನ್ನು ನೋಡಬಹುದು.

ಜನಪದರಿಂದ ಹಾಡಿ ಹೊಗಳಿಸಿಕೊಳ್ಳುವ ಮಹದೇಶ್ವರರು, ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ  ಜನಿಸಿದರೆಂಬ ಪ್ರತೀತಿಯೂ ಇದೆ. ಇವರು ಹರದನಹಳ್ಳಿ ಮಠದ  ಮೂರನೇ ಮಠಾಧೀಶರಾಗಿದ್ದರೆಂದೂ ಹೇಳಲಾಗುತ್ತದೆ.

ಬಳಿಕ ಈ ಬೆಟ್ಟದ ರಮಣೀಯತೆಗೆ ಮನಸೋತು  ಇಲ್ಲಿ ನೆಲೆಸಿದ ಅವರು ಸುದೀರ್ಘ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದರೆಂದೂ,  ತಮ್ಮ  ತಪಃಶಕ್ತಿಯನ್ನು ಜನರ ಕಲ್ಯಾಣಕ್ಕಾಗಿ ವಿನಿಯೋಗಿಸಿದರೆಂದೂ, ಇವರಲ್ಲಿ ಅಲೌಕಿಕ ಶಕ್ತಿ ಇದ್ದೆಂದೂ ಹೇಳಲಾಗುತ್ತದೆ.  ಮಹದೇಶ್ವರರ ಪವಾಡಗಳನ್ನು ಕಣ್ಣಾರೆ ಕಂಡವರು ತಿಳಿಸಿರುವ ಪ್ರಸಂಗಗಳು ತಲೆಮಾರಿನಿಂದ ತಲೆಮಾರಿಗೆ ಮಾತಿನ ಮೂಲಕ, ಕಾವ್ಯದ ಮೂಲಕ, ಪದಗಳ ಮೂಲಕ ಹಬ್ಬಿ, ಜನಜನಿತವಾಗಿವೆ.

ತಮ್ಮ ಅಲೌಕಿಕ ಶಕ್ತಿಯನ್ನು ಸಮಾಜದ ಅದರಲ್ಲೂ ದೀನ ದಲಿತರ, ಶೋಷಿತರ ಉದ್ಧಾರಕ್ಕೆ ವಿನಿಯೋಗಿಸಿದ ಮಹದೇಶ್ವರರು, ಇಂದಿಗೂ ತಮ್ಮ ತಪಃಶಕ್ತಿಯಿಂದ ಬೆಟ್ಟಕ್ಕೆ ಬರುವ ಭಕ್ತರನ್ನು ಹರಸುತ್ತಿದ್ದಾರೆ, ಎಂಬುದು ನಂಬಿಕೆ.

ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಶಿವರಾತ್ರಿಯ ಮಹಾರಥೋತ್ಸವಕ್ಕೆ ಜನಜಾತ್ರೆಯೇ ಸೇರುತ್ತದೆ. ಮಹದೇಶ್ವರರಿಗೆ ಉಘೇ ಅನ್ರಪ್ಪೋ ಎಂದು ಒಬ್ಬರು ಕೂಗಿದರೆ, ಮಾದಪ್ಪಂಗೆ ಉಘೇ, ಉಘೆ ಎಂಬ ಭಕ್ತರ ಘೋಷಣೆ ಮುಗಿಲು ಮುಟ್ಟುತ್ತದೆ. ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಭಕ್ತ ಜನರು ಆಗಮಿಸುತ್ತಾರೆ.

ಧ್ವಜಗಳಿಂದ ಹಾಗೂ ಪುಷ್ಪಗಳಿಂದ ಅಲಂಕರಿಸಿದ ರಥದಲ್ಲಿ ಮಹದೇಶ್ವರರನ್ನು ಇಟ್ಟು ಎಳೆಯುವ ಭಕ್ತರು ಧನ್ಯತಾ ಭಾವ ಮೆರೆಯುತ್ತಾರೆ. ಜವನ ಹಾಗೂ ಬಾಳೆ ಹಣ್ಣುಗಳನ್ನು ರಥಕ್ಕೆ ಎಸೆಯುತ್ತಾರೆ. ಇದೇ ಸಂದರ್ಭದಲ್ಲಿ ಕೊಂಡೋತ್ಸವವೂ ನಡೆಯುತ್ತದೆ.

ಹೈದರಾಲಿಯ ಕಾಲದ 1761ರ ಒಂದು ಶಾಸನದಲ್ಲಿ ಮಾದೇಶ್ವರರ ಬಗ್ಗೆ  ವಿವರಗಳು ತಿಳಿದುಬರುತ್ತವೆ.