ಮನೆ ದೇವಸ್ಥಾನ ಮಲ್ಲೇಶ್ವರ ವೆಸ್ಟ್ ಪಾರ್ಕ್ ಗಣಪತಿ ದೇವಾಲಯ

ಮಲ್ಲೇಶ್ವರ ವೆಸ್ಟ್ ಪಾರ್ಕ್ ಗಣಪತಿ ದೇವಾಲಯ

0

ಸಾಂಸ್ಕೃತಿಕವಾಗಿ ಹಾಗೂ ಸಾಹಿತ್ಯಿಕವಾಗಿ ಶ್ರೀಮಂತವಾದ ಮತ್ತು ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದಾದ ಮಲ್ಲೇಶ್ವರದ 16 ಮತ್ತು 17ನೇ ಕ್ರಾಸ್ ನ ವೆಸ್ಟ್ ಪಾರ್ಕ್ ನಲ್ಲಿ ಇರುವ ದೇವಾಲಯವೇ ಗಣಪತಿ ದೇವಾಲಯ.

Join Our Whatsapp Group

ಬೃಹತ್ ಅಶ್ವತ್ಥಮರದ ಪಕ್ಕದಲ್ಲಿರುವ ಈ ದೇವಾಲಯದಲ್ಲಿ ಸುಂದರವಾದ ಗಣಪತಿ ವಿರಾಜಮಾನನಾಗಿದ್ದಾನೆ.

ಈ ಗಣಪತಿಯ ಪ್ರತಿಷ್ಠಾಪನೆ ಆಗಿದ್ದು 1983ರಲ್ಲಿ. ಈ ಪ್ರದೇಶದಲ್ಲಿದ್ದ ಪಾರ್ಕ್ ನಲ್ಲಿ ಮಲ್ಲೇಶ್ವರ ಸಾಂಸ್ಕೃತಿಕ ಸಂಘ ಗಣೇಶೋತ್ಸವ ಏರ್ಪಡಿಸುತ್ತಿತ್ತು. ಉಳಿದ ಅವಧಿಯಲ್ಲಿ ಪೋಲಿ ಹುಡುಗರ ಆವಾಸ ಸ್ಥಾನವಾಗಿದ್ದ ಪಾರ್ಕ್ ಗೆ ಮುಕ್ತಿ ನೀಡಲು ನಿರ್ಧರಿಸಿದ ಸ್ಥಳೀಯರು ಹಾಗೂ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು 83ರಲ್ಲಿ ಇಲ್ಲಿ ಸುಂದರವಾದ ಗಣಪತಿಯ ಶಿಲಾ ವಿಗ್ರಹ ಪ್ರತಿಷ್ಠಾಪಿಸಿ ಪುಟ್ಟ ಆಲಯ ನಿರ್ಮಿಸಿದರು.

ಇಂದಿಗೂ ಮಲ್ಲೇಶ್ವರ ಸಾಂಸ್ಕೃತಿಕ ಸಂಘವೇ ದೇವಾಲಯದ ಆಡಳಿತ ಮಂಡಳಿಯಾಗಿ ನಿರ್ವಹಣೆಯ ಹೊಣೆಯನ್ನೂ ಹೊತ್ತಿದೆ. ಈ ದೇವಾಲಯಕ್ಕೆ ಸಾರ್ವಜನಿಕರ ಪ್ರೋತ್ಸಾಹವೂ ದೊರೆತು 87ರಲ್ಲಿ ಭವ್ಯವಾದ ದೇವಾಲಯವೇ ನಿರ್ಮಾಣವಾಯ್ತು.

1993ರಲ್ಲಿ ನವಗ್ರಹಗಳನ್ನೂ ಪ್ರತಿಷ್ಠಾಪಿಸಲಾಯಿತು. ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿತನಾದ ಗಣೇಶನ ದೇವಾಲಯದಲ್ಲಿ ಪ್ರತಿ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ.

ವಿಕಲ ಚೇತನರ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸಂಘ, ದೃಷ್ಟಿ ಹೀನರಿಂದ ಹಾಗೂ ವಿಕಲ ಚೇತನರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದೆ. ಈ ದೇವಾಲಯದಲ್ಲಿ ಪ್ರತಿ ನಿತ್ಯ ಶೈವಾಗಮದ ರೀತ್ಯ ಅಭಿಷೇಕ, ಪೂಜೆ, ಅಲಂಕಾರ ನಡೆಯುತ್ತದೆ.

ತಿಂಗಳಲ್ಲಿ ಎರಡು ದಿನ ಪ್ರದೋಷ ಪೂಜೆ, ಹುಣ್ಣಿಮೆಯ ದಿನ ಶ್ರೀ ಸತ್ಯನಾರಾಯಣ ಪೂಜೆ, ಸಂಕಷ್ಟ ಚೌತಿ ಪೂಜೆ, ಮಂಗಳವಾರ ಸಂಕಷ್ಟಿ ಬಂದರೆ, ಅಂಗಾರಕ ಸಂಕಷ್ಟಿಯ ಅಂಗವಾಗಿ ಹೋಮ, ಹವನವೂ ನಡೆಯುತ್ತದೆ.

ದೇವಾಲಯದ ಪಕ್ಕದಲ್ಲಿರುವ ಅಶ್ವತ್ಥ ಕಟ್ಟೆಯ ಕೆಳಗೆ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದ್ದು, ನಾಗರ ಪಂಚಮಿಯ ದಿನ ಜನ ಇಲ್ಲಿ ಬಂದು ತನಿ ಎರೆಯುತ್ತಾರೆ. ಪಕ್ಕದಲ್ಲಿಯೇ ನವಗ್ರಹಗಳ ದೇವಾಲಯವೂ ಇದೆ.

ನವರಾತ್ರಿಯ ಶಾರದೆಯ ಹಬ್ಬದ ದಿನ ಮಲ್ಲೇಶ್ವರ ಸಾಂಸ್ಕೃತಿಕ ಸಂಘ ಬಡ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕವನ್ನು ವಿತರಿಸುತ್ತಾ ಬಂದಿದೆ. ಹೊಸದಾಗಿ ವಾಹನ ಕೊಂಡವರು ಇಲ್ಲಿ ಬಂದು ಗಾಡಿ ಪೂಜೆ ಮಾಡಿಸುತ್ತಾರೆ.

ಹಿಂದಿನ ಲೇಖನಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್‌ ಗಾತ್ರದ ಮರ: ಇಬ್ಬರ ಸ್ಥಿತಿ ಗಂಭೀರ
ಮುಂದಿನ ಲೇಖನಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಒಟ್ಟಾಗಿ ಹೋರಾಡುವ ನಿರ್ಧಾರ: ಎಚ್.ಡಿ ಕುಮಾರಸ್ವಾಮಿ