ಹುಬ್ಬಳ್ಳಿ: ಇಂಡಿಯಾ ಮೈತ್ರಿಕೂಟದಲ್ಲಿ ಹೊಂದಾಣಿಕೆ ಇಲ್ಲ. ಬಲಿಪಶು ಮಾಡುವುದಕ್ಕಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಘಮಂಡಿ ಘಟಬಂಧನ್ ನಾಯಕನನ್ನಾಗಿ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ, ಇಂಡಿಯಾ ಕೂಟದ ಅಸ್ತಿತ್ವ ಎಲ್ಲಿದೆ, ತೋರಿಕೆಗೆ ಅಷ್ಟೇ ಇದೊಂದು ಘಟಬಂಧನ್. ಮಹಾರಾಷ್ಟ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಕಿತ್ತಾಟ ನಡೆಯುತ್ತಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಒಕ್ಕೂಟದಿಂದ ಹೊರ ಬರುವ ವಿಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋತರೇ ಗಾಂಧಿ ಕುಟುಂಬದ ಮೇಲೆ ಬರಬಾರದು, ಬಲಿಪಶು ಮಾಡಲೆಂದೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಘಮಂಡಿ ಘಟಬಂಧನ್ ನಾಯಕನನ್ನಾಗಿ ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ, ಪ್ರಹ್ಲಾದ್ ಜೋಶಿ, ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಎಲ್ಲರಿಗೂ ಆಹ್ವಾನ ಇತ್ತು, ಸಹಜವಾಗಿ ಬಂದಿದ್ದರೇ ಚರ್ಚೆ ಆಗುತ್ತಿರಲಿಲ್ಲ. ಎಲ್ಲಿ ವೋಟ್ ಸಿಗುತ್ತೆ ಅಲ್ಲಿಗೆ ಹೋಗುವ ವಿಚಾರ ಕಾಂಗ್ರೆಸ್ ನದ್ದು ಎಂದು ಕಿಡಿ ಕಾರಿದರು.