ಕಲಬುರಗಿ: ಇಂಡಿಯಾ ಒಕ್ಕೂಟದ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿ ಬಲಿಪಶು ಮಾಡಲಾಗುತ್ತಿದೆ ಎನ್ನುವ ಕೇಂದ್ರ ಸಚಿವ ಜೋಶಿ ಹೇಳಿಕೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಕರ್ನಾಟಕದವರೊಬ್ಬರು ಪ್ರಧಾನಿ ಹಂತದಲ್ಲಿ ಆಯ್ಕೆಯಾಗಿರುದಕ್ಕೆ ಅಭಿಮಾನ ಪಡಬೇಕು ಎಂದು ಕಿವಿಮಾತು ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂಡಿಯಾ ಒಕ್ಕೂಟ ಸಾಮಾನ್ಯ ಸಂಘಟನೆಯಲ್ಲ. ವಿವಿಧ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳು ಸೇರಿ ಕೇಂದ್ರ ಸರಕಾರದ ದುರಾಡಳಿತ ಜನವಿರೋಧಿ ನೀತಿ ವಿರುದ್ದ ರಾಷ್ಟ್ರಮಟ್ಟದಲ್ಲಿ ರೂಪಿಸಿರುವ ಒಕ್ಕೂಟವಿದು. ಅದಕ್ಕೆ ತನ್ನದೇ ಆದ ಮಹತ್ವ ಇದೆ. ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ ಎಂದರು.
ಒಬ್ಬ ಕನ್ನಡಿಗನಾಗಿ ಪ್ರಹ್ಲಾದ್ ಜೋಷಿ ಅವರು ಹೆಮ್ಮೆ ಪಡಬೇಕಿತ್ತು. ರಾಷ್ಟ್ರಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರುತಿಸಿರುವುದಕ್ಕೆ ಹೆಮ್ಮೆ ಪಡಬೇಕಿತ್ತು. ಅದನ್ನು ಬಿಟ್ಟು ಬೇಗುದಿಯಿಂದ ಹೆದರಿಕೆ ಶುರುವಾಗಿದೆ. ಖರ್ಗೆ ಖದರ್ರಿನಿಂದ ದೇಶದಲ್ಲಿ ಹೊಸ ಬಿರುಗಾಳಿ ಎದುರಾಗಬಹುದು ಎಂದು ಭಯಭೀತರಾಗಿ ಜೋಷಿ ಅವರು ಈ ರೀತಿ ಮಾತು ಹೇಳುತ್ತಿದ್ದಾರೆ ಎಂದು ಕಿಚಾಯಿಸಿದರು.