ಮೈಸೂರು: ಅಪೌಷ್ಠಿಕ ತೆಯು ಕಳಪೆ ಆಹಾರ ಅಥವಾ ಆಹಾರದ ಕೊರತೆಯಿಂದ ಉಂಟಾಗುತ್ತದೆ. ಸೇವಿಸುವ ಆಹಾರದಲ್ಲಿ ಪೋಷಕಾಂಶಗಳ ಮಟ್ಟ ಕಡಿಮೆ ಇರುವಾಗ ಅಥವಾ ಅಸಮತೋಲನದಿಂದ ಕೂಡಿರುವಾಗ ಪೌಷ್ಟಿಕಾಂಶದ ಕೊರತೆ ಉಂಟಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಕುಮಾರಸ್ವಾಮಿ ಪಿ.ಸಿ. ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇನರ್ ವೀಲ್ ಕ್ಲಬ್ ಆಫ್ ರೋಟರಿ-ಉತ್ತರ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸಹಯೋಗದೊಂದಿಗೆ ಜ.19 ರಂದು ನಂಜುಮಳಿಗೆ ಸರ್ಕಲ್‌ನ ಎಸ್.ಎಂ.ಟಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ “ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ”ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಸೂಕ್ತ ಪ್ರಮಾಣದಲ್ಲಿ ಪೋಷಕಾಂಶಗಳು ಇಲ್ಲದಿದ್ದರೆ ದೇಹಕ್ಕೆ ಅಗತ್ಯವಾದ ಪೋಷಣೆ ದೊರೆಯದು. ಅಂತಹ ಸಮಯದಲ್ಲಿ ನಾನಾ ಬಗೆಯ ಅನಾರೋಗ್ಯ ಸಮಸ್ಯೆಗಳು ಪ್ರಚೋದನೆ ಪಡೆದುಕೊಳ್ಳುತ್ತವೆ. ಈ ಸಮಸ್ಯೆಯು ಮಕ್ಕಳಲ್ಲಿ ಕಾಣಿಸಿಕೊಂಡರೆ ಅವರ ಬೆಳವಣಿಗೆಯಲ್ಲಿ ಕುಂದು ಕೊರತೆ ಕಾಣಿಸಿಕೊಳ್ಳುವುದು ಜೊತೆಗೆ ಕಲಿಕಾ ಸಾಮರ್ಥ್ಯ ಕುಂಠಿತವಾಗುವುದು, ಗ್ರಹಿಕಾ ಸಾಮರ್ಥ್ಯದಲ್ಲಿ ಕುಗ್ಗುವುದು, ಆಯಾಸಗೊಳ್ಳುವಿಕೆ ಮತ್ತು ಶಾಲಾ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ
ಆಸಕ್ತಿ ಇಲ್ಲದಿರುವುದು ಹಾಗೂ ಭಾಷಾ ಕಲಿಕೆಯಲ್ಲಿ ಹಿಡಿತ ಇಲ್ಲದಿರುವುದು ಕಂಡುಬರುವುದರೊoದಿಗೆ ಮಕ್ಕಳ ಭೌತಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ ಎಂದು ತಿಳಿಸಿದರು.
ಸೂಕ್ತ ತಪಾಸಣೆ ಹಾಗೂ ಪರೀಕ್ಷೆಯನ್ನು ಮಾಡಿಸಿದಾಗ ನಮ್ಮ ಆರೋಗ್ಯದ ಸಮಸ್ಯೆ ಏನು ಎನ್ನುವದರ ಬಗ್ಗೆ ಸೂಕ್ತ ಮಾಹಿತಿ ದೊರೆಯುವುದು. ಈ ಮೂಲಕ ಅಪೌಷ್ಟಿಕತೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಪೋಷಕಾಂಶ ಭರಿತ ಆಹಾರ ಸೇವಿಸುವುದರ ಮೂಲಕ ಸಮಸ್ಯೆಯನ್ನು ತಡೆಯಬಹುದು ಎಂದರು.
ಇದೇ ಸಂದರ್ಭದಲ್ಲಿ ಸುಮಾರು 100 ಮಕ್ಕಳಿಗೆ ಮಲ್ಟಿ ವಿಟಮಿನ್ ಸಿರಪ್,ಐರನ್ ಸಿರಫ್ ಮತ್ತು ಕ್ಯಾಲ್ಸಿಯಂ ಸಿರಫ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಜಯಂತ್ ಎಂ.ಎಸ್, ಮೈಸೂರು ಶಾಖೆ ಐ.ಎಂ.ಎ ನ ಕಾರ್ಯದರ್ಶಿಗಳಾದ ಡಾ.ಶಿವಶಂಕರ್, ಹಾಗೂ ಇನರ್ ವೀಲ್ ಕ್ಲಬ್ ಆಫ್ ರೋಟರಿ-ಉತ್ತರ, ಮೈಸೂರಿನ ಸದಸ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದ್ದರು.