ಮನೆ ಕಾನೂನು ಕರ್ನಾಟಕ, ಕೇರಳದಿಂದ ಪಿಎಫ್​ಐ ಚಟುವಟಿಕೆಗಳಿಗೆ ದುಬೈ ದುಡ್ಡು ಹಂಚುತ್ತಿದ್ದವನ ಬಂಧನ

ಕರ್ನಾಟಕ, ಕೇರಳದಿಂದ ಪಿಎಫ್​ಐ ಚಟುವಟಿಕೆಗಳಿಗೆ ದುಬೈ ದುಡ್ಡು ಹಂಚುತ್ತಿದ್ದವನ ಬಂಧನ

0

ಬೆಂಗಳೂರು: ನಿಷೇಧಿತ ಪಿಎಫ್​ಐ ಉಗ್ರ ಸಂಘಟನೆಯ ಕೃತ್ಯಗಳಿಗೆ ದುಬೈನಿಂದ ಬರುತ್ತಿದ್ದ ಹಣವನ್ನು ಕರ್ನಾಟಕ ಹಾಗೂ ಕೇರಳದಲ್ಲಿನ ತಂಡಗಳ ಮೂಲಕ ಹಂಚುತ್ತಿದ್ದ ಬಿಹಾರ ಮೂಲದ ವ್ಯಕ್ತಿಯನ್ನು ದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಬಂಧಿಸಿದೆ.

Join Our Whatsapp Group

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೊಹಮ್ಮದ್ ಸಜ್ಜದ್ ಆಲಂ ಎಂಬಾತ ಬಂಧಿತ ವ್ಯಕ್ತಿ. ಈತ ದುಬೈನಿಂದ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಬಂಧಿಸಲಾಗಿದೆ.

ಪಿಎಫ್‌ಐ ತರಬೇತಿ ಪಡೆದ ಕೇಡರ್ ಆಲಂ ವಿರುದ್ಧ ಬಂಧನ ವಿಶೇಷ ಎನ್‌ಐಎ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಅವರ ವಿರುದ್ಧ ಲುಕ್‌ಔಟ್ ಸುತ್ತೋಲೆ (ಎಲ್‌ಒಸಿ) ಕೂಡ ಹೊರಡಿಸಲಾಗಿತ್ತು ಎಂದು ಎನ್​ಐಎ ತಿಳಿಸಿದೆ.

ಎನ್​ಐಎ ಹೇಳಿದ್ದೇನು?

ಆರೋಪಿಯು ದುಬೈನಿಂದ ಬಿಹಾರದ ಪಿಎಫ್‌ಐ ಕಾರ್ಯಕರ್ತರಿಗೆ ಬರುತ್ತಿದ್ದ ದುಡ್ಡನ್ನು ಕರ್ನಾಟಕ ಮತ್ತು ಕೇರಳ ಮೂಲದ ತಂಡಗಳ ಮೂಲಕ ಅಕ್ರಮವಾಗಿ ರವಾನಿಸುತ್ತಿದ್ದ. ನಿಷೇಧಿತ ಸಂಘಟನೆಯ ಅಪರಾಧ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸಲು ಹಣವನ್ನು ಬಳಸಲಾಗಿತ್ತು ಎಂದು ಎನ್ಐಎ ಪ್ರಕಟಣೆ ತಿಳಿಸಿದೆ.

ಪಿಎಫ್​ಐ ಕಾರ್ಯಕರ್ತರು ಕಾನೂನುಬಾಹಿರ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಬಗ್ಗೆ 2022 ರ ಜುಲೈನಲ್ಲಿ ಬಿಹಾರದ ಫುಲ್ವಾರಿ ಷರೀಫ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಎನ್​ಐಎಗೆ ವಹಿಸಲಾಗಿತ್ತು.

ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಚಟುವಟಿಕೆಗಳ ಮೂಲಕ ವಿವಿಧ ಧರ್ಮಗಳು ಮತ್ತು ಗುಂಪುಗಳ ಸದಸ್ಯರ ನಡುವೆ ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸಲು ಮತ್ತು ಧಾರ್ಮಿಕ ದ್ವೇಷವನ್ನು ಹರಡಲು ನಿಷೇಧಿತ ಪಿಎಫ್​ಐ ಸಂಘಟನೆಯ ಕಾರ್ಯಕರ್ತರು ಸಂಚು ರೂಪಿಸಿದ್ದಾರೆ ಎಂದು ಎನ್​ಐಎ ಪ್ರಕಟಣೆ ತಿಳಿಸಿದೆ.

ಸಾರ್ವಜನಿಕ ಶಾಂತಿಗೆ ಭಂಗ ತರುವ, ಭಾರತದ ವಿರುದ್ಧ ಜನಾಭಿಪ್ರಾಯ ಉಂಟುಮಾಡುವ ಉದ್ದೇಶದಿಂದ ಮತ್ತು ಭಾರತವನ್ನು 2047ರ ವೇಳೆಗೆ ಇಸ್ಲಾಂ ರಾಷ್ಟ್ರ ಮಾಡುವ ಗುರಿಯೊಂದಿಗೆ ನಿಷೇಧಿತ ಸಂಘಟನೆ ಕಾರ್ಯಾಚರಿಸುತ್ತಿರುವ ಆರೋಪದೊಂದಿಗೆ ಚಾರ್ಜ್​ಶೀಟ್​​ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ 18ನೇ ಆರೋಪಿಯಾಗಿ ಮೊಹಮ್ಮದ್ ಸಜ್ಜದ್ ಆಲಂನನ್ನು ಬಂಧಿಸಲಾಗಿದೆ.