ಹೈದರಾಬಾದ್: ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್ ಏರ್’ಪೋರ್ಟ್’ನಲ್ಲಿ ಸೋಮವಾರ ನಡೆದಿದೆ.
ಹೈದರಾಬಾದ್’ನಿಂದ ಚೆನ್ನೈಗೆ ಹೊರಡಲು ಅಣಿಯಾಗುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಆರೋಪಿ ಕರೆ ಮಾಡಿ ಹೇಳಿದ್ದ. ಬಾಂಬ್ ಕರೆ ಬರುತ್ತಿದ್ದಂತೆಯೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಇಳಿಸಿ, ತನಿಖೆ ನಡೆಸಲಾಗಿತ್ತು.
ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿ ಇದೇ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ ತಡವಾಗಿ ಬಂದಿದ್ದರಿಂದ ವಿಮಾನ ಹತ್ತಲು ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಹೀಗಾಗಿ ಹುಸಿ ಬಾಂಬ್ ಕರೆ ಮಾಡಿದೆ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.