ಮನೆ ರಾಷ್ಟ್ರೀಯ ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹಾವು ಬಿಟ್ಟ ವ್ಯಕ್ತಿ ಬಂಧನ..!

ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹಾವು ಬಿಟ್ಟ ವ್ಯಕ್ತಿ ಬಂಧನ..!

0

ಮುಂಬೈ : ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಶೌಚಾಲಯದಲ್ಲಿ ಹಾವು ಬಿಟ್ಟ ಆರೋಪದಲ್ಲಿ ಸೆಂಟ್ರಲ್ ರೈಲ್ವೆಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಆರೋಪಿಯನ್ನು ಜಗನ್ ಅರ್ಜುನ್ ಭಾಲೆ ಎಂದು ಗುರುತಿಸಲಾಗಿದೆ. ಮುಂಬೈ – ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕೋಚ್ ಸಿ-16ರ ಶೌಚಾಲಯದಲ್ಲಿ ಹಾವು ಕಂಡುಬಂದಿತ್ತು.

ಪ್ರಯಾಣಿಕರು ಇದನ್ನು ಗಮನಿಸಿ ರೈಲ್ವೆ ಸಿಬ್ಬಂದಿಗೆ ತಿಳಿಸಿದ ನಂತರ ತಕ್ಷಣ ಶೌಚಾಲಯವನ್ನು ಮುಚ್ಚಲಾಯಿತು ಮತ್ತು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಯಿತು. ಸೋಲಾಪುರ ನಿಲ್ದಾಣದಲ್ಲಿ ಹಾವನ್ನು ಸುರಕ್ಷಿತವಾಗಿ ತೆಗೆದುಹಾಕಲಾಯಿತು. ಹಾವು ಸುಮಾರು 2.5 ಅಡಿ ಉದ್ದದ ಇಂಡಿಯನ್ ರ‍್ಯಾಟ್ ಸ್ನೇಕ್ (ವಿಷರಹಿತ) ಆಗಿತ್ತು ಎಂದು ವರದಿಗಳು ತಿಳಿಸಿವೆ. ಟ್ರೈನ್‌ನ ಸಿಸಿಟಿವಿ ದೃಶ್ಯಗಳ ಪರಿಶೀಲನೆ ವೇಳೆ ವ್ಯಕ್ತಿಯೊಬ್ಬ ಶೌಚಾಲಯಕ್ಕೆ ಪ್ರವೇಶಿಸಿ ಹಾವು ಬಿಟ್ಟಿರುವುದು ಬಹಿರಂಗವಾಗಿದೆ. ಆರೋಪಿ ಥಾಣೆ ನಿಲ್ದಾಣದಲ್ಲಿ ರೈಲನ್ನು ಏರಿ ಹಾವು ಬಿಟ್ಟು ಇಳಿದಿದ್ದಾನೆ ಎಂದು ತಿಳಿದುಬಂದಿದೆ.

ಆರ್‌ಪಿಎಫ್ ತಂಡದ ವಿಶೇಷ ತನಿಖೆ ಹಾಗೂ ತಾಂತ್ರಿಕ ಸಾಕ್ಷ್ಯಗಳು ಮತ್ತು ಮಾಹಿತಿದಾರನ ಸಹಾಯದಿಂದ ಆರೋಪಿಯನ್ನು ಗುರುತಿಸಲಾಯಿತು. ಆರೋಪಿ ಜಗನ್ ಅರ್ಜುನ್ ಭಾಲೆ ನಾಸಿಕ್ ಜಿಲ್ಲೆಯ ನಿವಾಸಿಯಾಗಿದ್ದಾನೆ. ತನಿಖೆಯ ಸಂದರ್ಭದಲ್ಲಿ ಆರೋಪಿ ತಾನು ಹಾವು ಬಿಟ್ಟಿದ್ದನ್ನು ಒಪ್ಪಿಕೊಂಡಿದ್ದಾನೆ. ಪ್ರಯಾಣಿಕರಲ್ಲಿ ಭಯ ಉಂಟುಮಾಡಲು ಅಥವಾ ತೊಂದರೆ ಉಂಟುಮಾಡಲು ಈ ಕೃತ್ಯ ಮಾಡಿದ್ದಾನೆ ಎಂದು ಹೇಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ಪಿಎಫ್‌ನಿಂದ ರೈಲ್ವೆ ಆಕ್ಟ್ 1989ರ ಸೆಕ್ಷನ್ 145 (ಬಿ), 147 ಮತ್ತು 153ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಕಲ್ಯಾಣದ ರೈಲ್ವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಮುಂದಿನ ತನಿಖೆಗಾಗಿ 14 ದಿನಗಳ ಮ್ಯಾಜಿಸ್ಟ್ರೇಟ್ ಕಸ್ಟಡಿಗೆ ನೀಡಿದೆ.