ಬೆಂಗಳೂರು: ಪಾರ್ಟಿ ಮಾಡಲು ಬಂದು ಗೆಳೆಯನ ಮನೆಯ ಲ್ಲೇ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಆತನೊಂದಿಗೆ ಪುಷ್ಪ ಸಿನಿಮಾ ವೀಕ್ಷಿಸಿ ತೆರಳಿದ್ದ ಏರೋನಾಟಿಕಲ್‌ಎಂಜಿನಿಯರ್ ಸುಬ್ರಮಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, ಆತನಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಏರೋನಾಟಿಕಲ್ ಎಂಜಿನಿಯರ್ ಉತ್ತರಹಳ್ಳಿ ನಿವಾಸಿ ಭರತ್ (25) ಬಂಧಿತ.
ಕಳೆದ ಡಿ.4ರಂದು ಭರತ್ ಹುಟ್ಟುಹಬ್ಬ ಇತ್ತು. ಇದಕ್ಕಾಗಿ ಸ್ನೇಹಿತರೆಲ್ಲರೂ ಸೇರಿ ಪಾರ್ಟಿ ಮಾಡಲು ನಿರ್ಧರಿಸಿದ್ದರು. ದೊಡ್ಡಗೌಡನಪಾಳ್ಯದಲ್ಲಿರುವ ಭರತ್ ಸ್ನೇಹಿತ ಮಣಿ ಎಂಬಾತನ ಮನೆಯಲ್ಲಿ ಕುಟುಂಬಸ್ಥರೆಲ್ಲರೂ ಸಂಬಂಧಿಕರ ಮದುವೆಗೆಂದು ಆಂಧ್ರಪ್ರದೇಶದ ಚಿತ್ತೂರಿಗೆ ಹೋಗಿದ್ದರು. ಆದರೆ, ಮಣಿ ಇವರ ಜೊತೆಗೆ ಹೋಗಿರಲಿಲ್ಲ. ಹೀಗಾಗಿ ಭರತ್ ಹಾಗೂ ಮತ್ತೂಬ್ಬ ಸ್ನೇಹಿತನನ್ನು ಮಣಿ ತಮ್ಮ ಮನೆಗೆ ಆಹ್ವಾನಿಸಿ ಪಾರ್ಟಿ ಮಾಡಿದ್ದ. ಸ್ನೇಹಿತರೆಲ್ಲರು ಸೇರಿ ಆರೋಪಿ ಭರತ್‌ಗೆ ಕೇಕ್ ಕಟ್ ಮಾಡಿಸಿ ಕಂಠ ಪೂರ್ತಿ ಮದ್ಯಪಾನ ಮಾಡಿ ಮಲಗಿದ್ದರು. ಈ ವೇಳೆ ಭರತ್ ಮಣಿ ಮನೆಯ ಬೀರುವಿನಲ್ಲಿದ್ದ 453 ಗ್ರಾಂ ಚಿನ್ನಾಭರಣ ಕದ್ದಿದ್ದ. ನಂತರ ತನಗೇನೂ ತಿಳಿದೇ ಇಲ್ಲ ಎಂಬಂತೆ ಸ್ನೇಹಿತರ ಪಕ್ಕದಲ್ಲಿ ಮಲಗಿದ್ದ.
ಮರುದಿನ ಬೆಳಗ್ಗೆ ಎದ್ದು ಮಣಿ ಜೊತೆಗೆ ಭರತ್ ಪುಷ್ಪ ಸಿನಿಮಾ ವೀಕ್ಷಿಸಿ ತೆರಳಿದ್ದ. ಇದಾದ ಬಳಿಕ ಊರಿಂದ ಮಣಿ ಪಾಲಕರು ಬಂದು ಮಣಿಗೆ ಮದುವೆಗೆಂದು ಖರೀದಿಸಿಟ್ಟಿದ್ದ 453 ಗ್ರಾಂ ಚಿನ್ನಾಭರಣ ಕಳುವಾಗಿರು ವುದು ಕಂಡು ಬಂದಿತ್ತು. ಇದನ್ನು ಮಣಿ ಸ್ನೇಹಿತ ಭರತ್‌ಗೆ ತಿಳಿಸಿದ್ದ. ಕಳ್ಳತನದ ವಿಚಾರವಾಗಿ ಸ್ವತಃ ಭರತ್ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ಕೊಡಿಸಿದ್ದ. ನಂತರ ಭರತ್ ಸೇರಿ ಮೂವರು ಸ್ನೇಹಿತರನ್ನು ಕರೆದು ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದ್ದರು. ಈ ವೇಳೆ ಭರತ್ ಕಳ್ಳಾಟ ಬಯಲಾಗಿದೆ. ವಿಚಾರಣೆ ವೇಳೆ ಕಳವು ಮಾಡಿದ್ದ ಚಿನ್ನಾಭರಣಗಳನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದಾಗಿ ಆರೋಪಿ ಹೇಳಿದ್ದ.
ಭರತ್ ಆರ್ಥಿಕವಾಗಿ ಸದೃಢನಾಗಿದ್ದ. ಹಣದ ಅವಶ್ಯಕತೆ ಇಲ್ಲದಿದ್ದರೂ ದುರಾಸೆಗೆ ಬಿದ್ದು ಕಳ್ಳತನ ಮಾಡಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.