ಮನೆ ಕಾನೂನು ವ್ಯಕ್ತಿ ಆತ್ಮಹತ್ಯೆ: ಮಾನಸಿಕ ಕಿರುಕುಳ ನೀಡಿದ ಮೂವರು ಆರೋಪಿಗಳಿಗೆ ಮೂರು ವರ್ಷ ಜೈಲು

ವ್ಯಕ್ತಿ ಆತ್ಮಹತ್ಯೆ: ಮಾನಸಿಕ ಕಿರುಕುಳ ನೀಡಿದ ಮೂವರು ಆರೋಪಿಗಳಿಗೆ ಮೂರು ವರ್ಷ ಜೈಲು

0

ವಿಜಯಪುರ: ಜಮೀನು ಸೀಮೆಯ ಜಗಳದ ಕಾರಣಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮೂವರು ಮಾನಸಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯವು ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದೆ.

ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನಾಗಠಾಣಾ ಗ್ರಾಮದಲ್ಲಿ ಶರಣಪ್ಪ ಅರಕೇರಿ ಎಂಬಾತ 2017 ಅಕ್ಟೋಬರ್ 25 ರಂದು ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಶರಣಪ್ಪ ಅರಕೇರಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ದಿನವೇ ಶರಣಪ್ಪ ಅವರೊಂದಿಗೆ ಪಕ್ಕದ ಜಮೀನಿಗೆ ಸೇರಿದ ದುಂಡಪ್ಪ ಗಿರಿಸಾಗರ, ಅಪ್ಪಣ್ಣ ಗಿರಿಸಾಗರ, ಯಲ್ಲವ್ವ ಅಪ್ಪಣ್ಣ ಗಿರಿಸಾಗರ ಇವರು ಜಗಳ ತೆಗೆದು ಮಾನಸಿಕ ಕಿರುಕುಳ ನೀಡಿದ್ದರು ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪಿಎಸ್‍ಐ ಸುರೇಶ ಗಡ್ಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಾಜಿ ಅನಂತ ನಾಲವಡೆ ಇವರು ಮೂವರೂ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಪ್ರಧಾನ ಅಭಿಯೋಜಕ ಎಸ್.ಎಚ್.ಹಕೀಮ ವಾದ ಮಂಡಿಸಿದ್ದರು.