ನವದೆಹಲಿ : ಕಂಠಪೂರ್ತಿ ಕುಡಿದು ಇಬ್ಬರು ಪೊಲೀಸ್ ಅಧಿಕಾರಿಗಳು ವಾಹನ ಚಲಾಯಿಸಿದ್ದಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೆಹಲಿಯ ರಾಮಕೃಷ್ಣ ಆಶ್ರಮ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಗಂಗಾರಾಮ್ ತಿವಾರಿ ಎಂದು ಗುರುತಿಸಲಾಗಿದ್ದು, ಟೀ ಸ್ಟಾಲ್‌ವೊಂದನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಸಹಾಯಕ ಸಬ್-ಇನ್ಸ್‌ಪೆಕ್ಟರ್ ರವೀಂದ್ರ ಹಾಗೂ ಕಾನ್‌ಸ್ಟೆಬಲ್ ಅರುಣ್ ಅನ್ನು ಅಮಾನತುಗೊಳಿಸಿದ್ದಾರೆ.
ಇಂದು (ಸೆ.18) ಬೆಳಗ್ಗೆ ಈ ಅವಘಡ ಸಂಭವಿಸಿದ್ದು, ಈ ಕುರಿತು ಮೃತ ವ್ಯಕ್ತಿಯ ಮಗ ಮಾತನಾಡಿ, ಇಬ್ಬರು ಅಧಿಕಾರಿ ಹಾಗೂ ಓರ್ವ ಮಹಿಳೆಯಿದ್ದ ಪೊಲೀಸ್ ವಾಹನವು ನನ್ನ ತಂದೆಗೆ ಡಿಕ್ಕಿ ಹೊಡೆದಿದೆ. ಅವರು ತುಂಬಾ ಕುಡಿದಿದ್ದರು. ನನ್ನ ತಂದೆ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರ‍್ಯಾಂಪ್ ಮೇಲೆ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಘಟನೆ ನಡೆದ ಸ್ಥಳದ ಹತ್ತಿರದಲ್ಲಿಯೇ ಒಂದು ಜಾಗವಿದೆ. ಅವರು ಯಾವಾಗಲೂ ಅಲ್ಲಿ ಕುಡಿಯಲು ಬರುತ್ತಾರೆ. ಅಲ್ಲದೇ ಅವರ ವ್ಯಾನ್‌ನಲ್ಲಿ ಖಾಲಿ ಮದ್ಯದ ಬಾಟಲಿಗಳಿದ್ದವು, ಅಲ್ಲದೇ ಮದ್ಯದ ವಾಸನೆಯೂ ಬರುತ್ತಿತ್ತು ಎಂದು ತಿಳಿಸಿದ್ದಾರೆ.
ಈ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಬ್ಬರು ಪೊಲೀಸರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.















