ಚಾಮರಾಜನಗರ : ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಚೆಲ್ಲಾಟ ಆಡಿದ್ದ ಆರೋಪಿಗೆ ಅರಣ್ಯ ಇಲಾಖೆ 25 ಸಾವಿರ ರೂಪಾಯಿ ದಂಡ ವಿಧಿಸಿ, ವನ್ಯಜೀವಿಗಳಿಗೆ ತೊಂದರೆ ಕೊಡದಂತೆ ಮುಚ್ಚಳಿಕೆ ಬರೆಸಿಕೊಂಡಿದೆ.
ಗುಂಡ್ಲುಪೇಟೆಯ ಶಾಹುಲ್ ಹಮೀದ್ ಎಂಬವರು 25 ಸಾವಿರ ದಂಡ ಕಟ್ಟಿದ್ದಾರೆ. ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಮುಂದೆ ಫೋಟೋಗಾಗಿ ಹುಚ್ಚಾಟ ಮೆರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಗುಂಡ್ಲುಪೇಟೆ-ಊಟಿ ಹೆದ್ದಾರಿ ಹಾದುಹೋಗುವ ಬಂಡೀಪುರದಲ್ಲಿ ಕಾಡಾನೆ ಮುಂದೆ ಕಿರುಚಾಡಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ರಸ್ತೆಗೆ ಬಂದ ಕಾಡಾನೆ ಕಂಡು ಫೋಟೋ ತೆಗೆಸಿಕೊಂಡು ಹಾ.., ಹೂ.. ಎಂದು ಕಿರುಚಾಡಿ ಕೀಟಲೆ ಮಾಡಿದ್ದರು. ಕಾಡಾನೆ ಎದುರು ಹುಚ್ಚಾಟ ಮೆರೆದ ಯುವಕನನ್ನು ಬಂಧಿಸಬೇಕೆಂದು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಆಗ್ರಹಿಸಿದ್ದರು.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಂಡೀಪುರ ಅರಣ್ಯ ಇಲಾಖೆಯು 25 ಸಾವಿರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.














