ನವದೆಹಲಿ : 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸೇವಕನನ್ನು ಪ್ರಸಾದ ವಿಚಾರಕ್ಕಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಪ್ರಸಿದ್ಧ ಕಲ್ಕಾಜಿ ದೇವಸ್ಥಾನದಲ್ಲಿ ನಡೆದಿದೆ. ಮೃತರನ್ನು ಉತ್ತರ ಪ್ರದೇಶದ ಹಾರ್ಡೋಯ್ ನಿವಾಸಿ ಯೋಗೇಂದ್ರ ಸಿಂಗ್ (35) ಎಂದು ಗುರುತಿಸಲಾಗಿದ್ದು, ಕಳೆದ 15 ವರ್ಷಗಳಿಂದ ಕಲ್ಕಾಜಿ ದೇವಸ್ಥಾನದಲ್ಲಿ ಸೇವಕರಾಗಿದ್ದರು.
ನೆನ್ನೆ (ಶುಕ್ರವಾರ) ರಾತ್ರಿ ಭಕ್ತರ ಗುಂಪೊಂದು ದೇವಸ್ಥಾನಕ್ಕೆ ಆಗಮಿಸಿತ್ತು. ಈ ವೇಳೆ ಪ್ರಸಾದ ವಿಚಾರಕ್ಕೆ ಪ್ರಾರಂಭವಾದ ಜಗಳ ತಾರಕಕ್ಕೇರಿ ಸೇವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಸೇವಕನನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಘಟನೆ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಹಲ್ಲೆಯಿಂದಾಗಿ ವ್ಯಕ್ತಿ ನೆಲದ ಮೇಲೆ ಬಿದ್ದ ಬಳಿಕವೂ ಮೂರು ಜನರು ಕೋಲಿನಿಂದ ಹೊಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗಾಗಲೇ ಓರ್ವ ಶಂಕಿತ ಆರೋಪಿಯನ್ನು ಬಂಧಿಸಿ, ಇನ್ನುಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.














