ಚೆನ್ನೈ: ದೇವಸ್ಥಾನಗಳ ಅರ್ಚಕರಾಗಿ ಯಾವುದೇ ಜಾತಿ/ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ನೇಮಕ ಮಾಡಬಹುದು ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅರ್ಚಕರ ನೇಮಕಾತಿಯು ಜಾತ್ಯಾತೀಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಅರ್ಚಕರ ಹುದ್ದೆಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ವಂಶಪಾರಂಪರ್ಯದ ಹಕ್ಕು ಕೇಳಲಾಗದು ಎಂದು ನ್ಯಾ.ಎನ್.ಆನಂದ್ ವೆಂಕಟೇಶ್ ಅವರಿದ್ದ ಪೀಠ ಹೇಳಿದೆ.
ಅಲ್ಲದೇ ದೇವಸ್ಥಾನದ ಅರ್ಚಕರಾಗಿ ನೇಮಕಗೊಳ್ಳುವ ವ್ಯಕ್ತಿಗೆ ಇರಬೇಕಾದ ಅರ್ಹತೆ ಒಂದೇ. ಅದು ದೇವಸ್ಥಾನದ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಸರಿಯಾಗಿ ತಿಳಿದಿರಬೇಕು. ಅಂತಹ ಯಾವುದೇ ವ್ಯಕ್ತಿಯನ್ನು ಜಾತಿ/ಪಂಗಡ ಪರಿಗಣಿಸದೇ ಅರ್ಚಕರಾಗಿ ನೇಮಕ ಮಾಡಬಹುದು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಅಲ್ಲದೇ ದೇವಸ್ಥಾನಗಳಿಗೆ ವಂಶಪಾರಂಪರ್ಯವಾಗಿ ಬಂದವರನ್ನೇ ಅರ್ಚಕರಾಗಿ ನೇಮಕ ಮಾಡಬೇಕು, ಇತರೆ ಜಾತಿಯವರನ್ನು ನೇಮಕ ಮಾಡಬಾರದು ಎಂದು ಉಲ್ಲೇಖಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಹೈಕೋರ್ಟ್ ತನ್ನ ತೀರ್ಪಿಗೆ ಪೂರಕವಾಗಿ ಸುಪ್ರೀಂಕೋರ್ಟ್ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ : ತಮಿಳುನಾಡಿನ ಸೇಲಂ ಜಿಲ್ಲೆಯ ಶ್ರೀ ಸುಗುವಣೇಶ್ವರ ದೇವಸ್ಥಾನಕ್ಕೆ ಅರ್ಚಕರು/ ಸ್ಥಾನಿಕ ಹುದ್ದೆಗೆ ನೇಮಕಾತಿ ಮಾಡುವ ಸಂಬಂಧ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ನಿಯಮ ಬಾಹಿರವಾಗಿ ಅರ್ಚಕರ ನೇಮಕಾತಿಗೆ ಮುಂದಾಗಿದ್ದಾರೆ. ವಂಶಪಾರಂಪರ್ಯವಾಗಿ ತಾವು ದೇವಸ್ಥಾನದ ಅರ್ಚಕರಾಗಿದ್ದು, ತಮ್ಮನ್ನು ಅರ್ಚಕ ಹುದ್ದೆಗೆ ಪರಿಗಣಿಸದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದರು.