ಸ್ನೇಹಿತನ ಕಾರನ್ನು ಕೊಂಡೊಯ್ದು ನಕಲಿ ದಾಖಲೆ ಸೃಷ್ಠಿಸಿ ಬೇರೊಬ್ಬರಲ್ಲಿ ಗಿರವಿ ಇಟ್ಟಿರುವ ಘಟನೆ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ನಡೆದಿದೆ.
ಮಂಡಿ ಮೊಹಲ್ಲಾದ ನಿವಾಸಿ ಮಹಮ್ಮದ್ ಫಯಾಜ್ ಸ್ನೇಹಿತನಿಂದ ಮೋಸ ಹೋದ ವ್ಯಕ್ತಿ.
ಮಹಮ್ಮದ್ ಫಯಾಜ್ ಜೀವನ ನಡೆಸಲು ರಿಯಲ್ ಎಸ್ಟೇಟ್ ಹಾಗೂ ಕಾರ್ ಡೀಲಿಂಗ್ ವ್ಯವಹಾರ ಮಾಡುತ್ತಿದ್ದು, ತನ್ನ ದಿನನಿತ್ಯದ ವ್ಯವಹಾರದ ಅನುಕೂಲಕ್ಕೆ ತನ್ನ ಸ್ವಂತ ಹಣದಿಂದ KA-09 M-7342 ನಂಬರಿನ ಮಾರುತಿ ರಿಟ್ಜ್ ಕಾರು ಖರೀದಿಸಿರುತ್ತಾನೆ.
ಮಂಡಿ ಮೊಹ್ಹಲ್ಲದ ನಿವಾಸಿ ನಯೀಮ್ ಉಲ್ಲಾ ಶರೀಫ್ ಎಂಬಾತ, ಮಹಮ್ಮದ್ ಫಯಾಜ್ ನಿಗೆ ಸ್ನೇಹಿತನಾಗಿರುತ್ತಾನೆ.
ನಯೀಮ್ ಉಲ್ಲಾ ಶರೀಫ್ ತನ್ನ ಸ್ನೇಹಿತ ಮಹಮ್ಮದ್ ಫಯಾಜ್ ಬಳಿ ಬಂದು, “ನನ್ನ ಸೋದರಿಯ ಮದುವೆ ನಿಶ್ಚಯವಾಗಿದೆ. ಮದುವೆ ಕಾರ್ಯದ ಓಡಾಟಕ್ಕಾಗಿ ಕೆಲ ದಿನಗಳ ಮಟ್ಟಿಗೆ ನಿನ್ನ ಕಾರನ್ನು ನೀಡಬಹುದಾ?” ಎಂದು ಕೇಳಿರುತ್ತಾನೆ.
ಫಯಾಜ್, ನಿನ್ನ ಸೋದರಿ ನನ್ನ ಸೋದರಿ ಇದ್ದ ಹಾಗೆ, ಖಂಡಿತವಾಗಿ ಕೊಡುವೆ, ಜೋಪಾನದಿಂದ ಉಪಯೋಗಿಸಿ ಹಿಂದಿರುಗಿಸು, ಕಾರು ತನ್ನ ದಿನನಿತ್ಯದ ವ್ಯವಹಾರಕ್ಕೆ ಬೇಕು ಹಾಗೂ ಅದು ತನ್ನ ಲಕ್ಕಿ ಕಾರು ಎಂದು ತಿಳಿಸಿ ಪ್ರೀತಿಯಿಂದ ನೀಡಿರುತ್ತಾನೆ.
ಮದುವೆ ಕಾರ್ಯ ಮುಗಿದ ಹಲವಾರು ದಿನಗಳ ನಂತರ, ಮಹಮ್ಮದ್ ಫಯಾಜ್ ಕಾರು ಹಿಂತಿರುಗಿಸಲು ನಯೀಮ್ ಉಲ್ಲಾ ಶರೀಫ್‌ಗೆ ವಿನಂತಿಸಿದಾಗ, ನಯೀಮ್ ಉಲ್ಲಾ ಶರೀಫ್ “ಹೊಸದಾಗಿ ಮದುವೆಯಾದ ಸೋದರಿ ಮತ್ತು ಅವಳ ಗಂಡ ಸುತ್ತಾಡಲು ವಾಹನವನ್ನು ಬಳಸುತ್ತಿದ್ದಾರೆ. ಒಂದು ವಾರದ ನಂತರ ಕಾರನ್ನು ಮರಳಿಸುತ್ತೇನೆ” ಎಂದು ತಿಳಿಸಿರುತ್ತಾನೆ. ನಯೀಮ್ ಉಲ್ಲಾ ಶರೀಫ್ ವಾರಗಳಾದರೂ ಕಾರನ್ನು ಮರಳಿಸಲಿಲ್ಲ. ಸ್ನೇಹಿತ ಇದ್ದಕಿದ್ದಂತೆ ನೇರ ಭೇಟಿಗೆ ಲಭ್ಯವಾಗದೇ ಫೋನ್ ಕರೆಗಳಿಗೆ ಸ್ಪಂದಿಸದೆ, ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದೆ ಕದ್ದು ಮುಚ್ಚಿ ಸುತ್ತಾಡಲು ಶುರು ಮಾಡಿದ. ಅನುಮಾನಗೊಂಡ ಮಹಮ್ಮದ್ ಫಯಾಜ್ ತನ್ನ ಸ್ನೇಹಿತ ನಯೀಮ್ ಉಲ್ಲಾ ಶರೀಫ್ ಮನೆ ಬಳಿ ಹೋಗಿ ಕದ್ದು ಹೋಗುತ್ತಿದ್ದ ನಯೀಮ್ ಉಲ್ಲಾ ಶರೀಫ್‌ನನ್ನು ತಡೆದು ವಿಚಾರಿಸಿದಾಗ, ಸಹಾಯ ಮಾಡಿದ ಸ್ನೇಹಿತನನ್ನು ಮತು ಹಲವಾರು ವರ್ಷಗಳು ಸ್ನೇಹವನ್ನು ನೋಡದೇ ಉಡಾಫೆಯಿಂದ ತಾನು ಕೊಟ್ಟಾಗ ಕಾರನ್ನು ಪಡೆಯಬೇಕು ಎನ್ನುವ ಧಾಟಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಲು ಆರಂಭಿಸಿದ.
ಮಹಮ್ಮದ್ ಫಯಾಜ್‌ಗೆ ತನ್ನ ಸ್ನೇಹಿತನ ನಡವಳಿಕೆ ಅನುಮಾನಾಸ್ಪದವಾಗಿ ಕಂಡು, ತಾನು ತನ್ನ ಕಾರಿಗೆ ಅಳವಡಿಸಿದ GPS Tracker ಮೂಲಕ ಕಾರು ಇರುವ ಸ್ಥಳದ ಮಾಹಿತಿಯನ್ನು ಪಡೆದು ತನ್ನ ಸೋದರ ಮಾವನೊಂದಿಗೆ ಕಾರು ಇದ್ದ ಕೆ. ಆರ್ ನಗರಕ್ಕೆ ಹೋಗುತ್ತಾನೆ. ಆದರೆ ಕಾರು ಪಡೆದಿದ್ದ ನಯೀಮ್ ಉಲ್ಲಾ ಶರೀಫ್ ಕಾರನ್ನು ಹುಣಸೂರಿನ ಆದಿಲ್ ಸಲೀಮ್ ಎಂಬುವವರ ಬಳಿ ಗಿರವಿ ಇಟ್ಟಿರುತ್ತಾನೆ. ಗಿರವಿ ಇಡಲು ಮಹಮ್ಮದ್ ಫಯಾಜ್ ಹೆಸರಿನಲ್ಲಿದ್ದ ದಾಖಲೆಗಳ ನಕಲನ್ನು ತಯಾರಿಸಿ ಸಹಿಯನ್ನು ನಕಲು ಮಾಡಿ ಹುಣಸೂರಿನ ಆದಿಲ್ ಸಲೀಮ್ ಎಂಬುವವರ ಬಳಿ ಗಿರವಿ ಇಟ್ಟಿರುತ್ತಾನೆ. ಆದಿಲ್ ಸಲೀಂ ಸದರಿ ಕಾರನ್ನು ಕೆ.ಆರ್ ನಗರದ ಚಿರಾಗ್ ಎಂಬುವವರ ಬಳಿ ತಂದು ನಿಲ್ಲಿಸಿ ತನ್ನ ಹಣ ಪಡೆದುಕೊಂಡಿರುತ್ತಾನೆ.
ಈ ಸುದ್ದಿ ಕೇಳಿದ ಮಹಮ್ಮದ್ ಫಯಾಜ್ ಗಾಬರಿಯಿಂದ ನಯೀಮ್ ಉಲ್ಲಾ ಶರೀಫ್‌ಗೆ ಎಷ್ಟೇ ಕರೆ ಮಾಡಿದರೂ ಸಹ ನಯೀಮ್ ಉಲ್ಲಾ ಶರೀಫ್ ಸಂಪರ್ಕಕ್ಕೆ ಸಿಗುವುದಿಲ್ಲ. ನಯೀಮ್ ಉಲ್ಲಾ ಶರೀಫ್ ಮನೆಯ ಬಳಿ ಹೋದರೂ ಅವರ ಮನೆಯವರು ಯಾವುದಕ್ಕೂ ಸ್ಪಂದಿಸುವುದಿಲ್ಲ.
ಮಹಮ್ಮದ್ ಫಯಾಜ್ ತನ್ನ ಮಾವ ಇರ್ಫಾನ್ ಬಳಿ ತನ್ನ ನೋವನ್ನು ತೋಡಿಕೊಂಡಾಗ ಮಾವ ಸಹ ಪೊಲೀಸ್ ಕಂಪ್ಲೇಂಟ್ ಕೊಡಲು ನಿರ್ಧರಿಸಿ ತಾನೂ ಏಜೆಂಟ್ ಅಗಿ ಕೆಲಸ ಮಾಡುತ್ತಿದ್ದ 55 ರ ಆರ್.ಟಿ.ಓ ಬಳಿ ವಾಹನ ಚಾಲನ ತರಬೇತಿ ಶಾಲೆಯೊಂದಿಗೆ 55ರ ಆರ್.ಟಿ.ಓ ನಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಸಾಜೀದ್‌ರವರ ಸಹಾಯವನ್ನು ಕೇಳುತ್ತಾನೆ.
ಪೊಲೀಸ್ ಸ್ಟೇಷನ್ ಮತ್ತು ಸೆಟಲಮೆಂಟ್ ವ್ಯವಹಾರಗಳಲ್ಲಿ ನಿಸೀಮನಾಗಿದ್ದ ಏಜೆಂಟ್ ಸಾಜೀದ್, ಮಹಮ್ಮದ್ ಫಯಾಜ್ ಮತ್ತು ಅವನ ಮಾವ ಇರ್ಫಾನ್ ರವರನ್ನು ಕರೆದುಕೊಂಡು ಮೊದಲು ಎನ್.ಆರ್ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಡಲು ನಿರ್ಧರಿಸುತ್ತಾರೆ. ಆದರೆ ಆ ಸಮಯದಲ್ಲಿ ಆರ್.ಟಿ.ಓ ಏಜೆಂಟ್ ಸಾಜೀದ್‌ರವರ ಮನಸ್ಸಿನಲ್ಲಿ ಏನಿತ್ತೋ, ಮಹಮ್ಮದ್ ಫಯಾಜ್ ಮತ್ತು ಅವನ ಮಾವ ಇರ್ಫಾನ್ ರವರನ್ನು ಎನ್.ಆರ್ ಪೊಲೀಸ್ ಠಾಣೆ ಕರೆದುಕೊಂಡು ಹೋಗದೇ ನೇರವಾಗಿ ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಬ್ದುಲ್ ಕರೀಂ ರಾವ್‌ತರ್ ಬಳಿ ಕರೆದುಕೊಂಡೂ ಹೋಗಿ ಮೌಖಿಕವಾಗಿ ಮಹಮ್ಮದ್ ಫಯಾಜ್ ಮತ್ತು ಅವನ ಮಾವ ಇರ್ಫಾನ್ ಮೂಲಕ ದೂರನ್ನು ಕೊಡಿಸುತ್ತಾನೆ. ಕಾನೂನಿನ ಪ್ರಕಾರ ಎನ್.ಆರ್ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ನೀಡಬೇಕಾದವರು ಧರ್ಮಾಧಾರಿತವಾಗಿ ಕೆಲಸ ಬೇಗ ಆಗುತ್ತದೆ ಎಂದು ಮೂರ್ಖತನದಿಂದ ಸದರಿ ಕೃತ್ಯಕ್ಕೆ ಯಾವುದೇ ಸಂಬಂಧವಿರದ ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಬ್ದುಲ್ ಕರೀಂ ರಾವ್‌ತರ್ ರವರಿಗೆ ಮೌಖಿಕವಾಗಿ ಆರ್.ಟಿ.ಓ ಏಜೆಂಟ್ ಸಾಜೀದ್ ಮುಖಾಂತರ ಮಹಮ್ಮದ್ ಫಯಾಜ್ ಮತ್ತು ಅವನ ಮಾವ ಇರ್ಫಾನ್ ದೂರನ್ನು ನೀಡುತ್ತಾರೆ.

ಘಟನೆಯ ಸಂಬಂಧ ಮಾಹಿತಿ ಪಡೆದ ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಬ್ದುಲ್ ಕರೀಂ ರಾವ್‌ತರ್ ರವರು ತಮ್ಮದೇ ಕಾರು ಕಳೆದುಕೊಂಡಿರುವಂತೆ ರೋಷಾವೇಷದಿಂದ ಅದೇ ದಿನ ತಮ್ಮ ಕಛೇರಿಯ ಅಪರಾಧ ವಿಭಾಗದ ಸಿಬ್ಬಂಧಿಗಳಿಗೆ ಸದರಿ ಕಾರನ್ನು ತರುವಂತೆ ನಿರ್ದೇಶಿಸುತ್ತಾರೆ. ಮಹಮ್ಮದ್ ಫಯಾಜ್ ತನ್ನ ಕಾರಿನ ಆಗು ಹೋಗುಗಳ ಪರಿಶೀಲನೆಗಾಗಿ ಅಳವಡಿಸಿದ GPS Tracker ಮೂಲಕ ಕಾರು ಇರುವ ಸ್ಥಳದ ಮಾಹಿತಿಯನ್ನು ಪಡೆದು ಆ ಸಮಯದಲ್ಲಿ ದಟ್ಟಗಳ್ಳಿಯಲ್ಲಿದ್ದ ಗುರು ಎಂಬುವವರ ಬಳಿಯಿಂದ ಅಪರಾಧ ವಿಭಾಗದ ಸಿಬ್ಬಂಧಿಗಳು ಕಾರನ್ನು ವಶಪಡಿಸಿಕೊಳ್ಳುತ್ತಾರೆ. ನಂತರ ಕಾರನ್ನು ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳ ಕಛೇರಿಗೆ ತಂದು ನಿಲ್ಲಿಸಿದಾಗ ಕಾರಿನೊಂದಿಗೆ ಬಂದ ಗುರು ಹೇಳಿದ ಕಥೆ ಇನಷ್ಟು ಮಾಹಿತಿಗಳನ್ನು ತಿಳಿಸುತ್ತವೆ.
ಹುಣಸೂರಿನ ಆದಿಲ್ ಸಲೀಂ ಗಿರವಿ ಇಟ್ಟುಕೊಂಡ ವಾಹನವನ್ನು ಮತ್ತೇ ಗಿರವಿ ಇಡುವುದು ಕೆ.ಆರ್ ನಗರದ ಚಿರಾಗ್ ಎಂಬುವವರ ಬಳಿ. ಆದರೆ ಕೆ.ಆರ್ ನಗರದ ಚಿರಾಗ್ ಎಂಬುವವರು ಸದರಿ ವಾಹನವನ್ನು ಮೈಸೂರಿನ ಗುರು ಎಂಬುವವರಿಗೆ ಗಿರವಿ ಇಟ್ಟು ತಮ್ಮ ಪಾಲಿನ ಹಣವನ್ನು ಪಡೆದುಕೊಂಡಿರುತ್ತಾರೆ. ಇಷ್ಟು ಬದಲಾವಣೆಗಳಾಗಿರುವುದು ಯಾರದೋ ವಾಹನವನ್ನು ಯಾರೋ ತಂದು ನಕಲಿ ದಾಖಲೆಗಳ ಮೂಲಕ ಗಿರವಿ ಇಟ್ಟಿರುವ ವಾಹನಕ್ಕೆ. ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳ ಕಛೇರಿಗೆ ತಂದು ನಿಲ್ಲಿಸಿದಾಗ ಕಾರಿನೊಂದಿಗೆ ಬಂದ ಗುರು ಹೇಳಿದ ಕಥೆ ಇನಷ್ಟು ಮಾಹಿತಿಗಳನ್ನು ಪಡೆದ ಉಪ ಪೊಲೀಸ್ ವರಿಷ್ಟಾಧಿಕಾರಿಗಳು ದುರಾಸೆ ಮತ್ತು ದುರಾಲೋಚನೆಯಿಂದ ತನಗೆ ಸಂಬಂಧಿಸದ ಕೇಸಿನಲ್ಲಿ ತನಿಖೆ ಮಾಡುವ ನೆಪದಲ್ಲಿ ಕಾರನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದರೊಂದಿಗೆ ಕಾರಿನ ಮಾಲೀಕರಿಗೆ ಮೂಲ ದಾಖಲಾತಿಗಳನ್ನು ತಂದು ಕೊಡುವಂತೆ ತಿಳಿಸಿ, ಕಾರಿಗೆ ಸಂಬಂಧಿಸಿದ ಮೂಲ ದಾಖಲಾತಿಗಳಾನ್ನು ತಮ್ಮ ಭಂಟ ಆರ್.ಟಿ.ಓ ಏಜೆಂಟ್ ಸಾಜಿದ್ ಸಮಕ್ಷಮದಲ್ಲಿ ಕಾರಿನ ಮಾಲೀಕನಿಂದ ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಬ್ದುಲ್ ಕರೀಂ ರಾವ್‌ತರ್‌ರವರು ದಿನಾಂಕ ೩೦-೦೮-೨೦೨೪ರಂದು ಪಡೆದುಕೊಳ್ಳುತ್ತಾರೆ.

ಸೆಪ್ಟಂಬರ್ ೨೦೨೪ರಿಂದ ಫೆಬ್ರವರಿ ೨೦೨೫ರವರೆಗೆ ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಬ್ದುಲ್ ಕರೀಂ ರಾವ್‌ತರ್‌ರವರು ಮತ್ತು ಅವರ ಕುಟುಂಬಸ್ಥರು ಅಮಾಯಕ ಮಹಮ್ಮದ್ ಫಯಾಜ್‌ಗೆ ಸೇರಿದ ಕಾರನ್ನು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದರು. ಅಬ್ದುಲ್ ಕರೀಂ ರಾವ್‌ತರ್‌ರವರು ಉಪಯೋಗಿಸುತ್ತಿದ್ದ ಸದರಿ ಕಾರು ಅವರ ಮನೆಯ ಮುಂಭಾಗ, ತಮ್ಮ ಕಛೇರಿಯ ಮುಂದೆ ಹಾಗೂ ಅಬ್ದುಲ್ ಕರೀಂ ರಾವ್‌ತರ್‌ರವರು ಕರ್ನಾಟಕ ಪೊಲೀಸ್ ಆಕಾಡೆಮಿಗೆ ಕಾರ್ಯನಿಮಿತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಇರುವ ಕಾರಿನ ಫೋಟೊಗಳು ಸೇರಿದಂತೆ ಅವರ ಕುಟುಂಬಸ್ಥರು ಸುತ್ತಾಡುತ್ತಿರುವ ವೀಡಿಯೋಗಳು ಈ ಅಕ್ರಮಕ್ಕೆ ಸಾಕ್ಷಿಯಾಗಿವೆ.
ಕಾರನ್ನು ವಶಕ್ಕೆ ಪಡೆದು ೬ ತಿಂಗಳುಗಳ ಕಾಲವಾದರೂ ವಾಹನವನ್ನು ನೀಡುವಂತೆ ಕಾರಿನ ಮಾಲೀಕ ಮಹಮ್ಮದ್ ಫಯಾಜ್ ದಂಬಾಲು ಬಿದ್ದಾಗ ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಬ್ದುಲ್ ಕರೀಂ ರಾವ್‌ತರ್‌ರವರು ನೀನು ನಕಲಿ ದಾಖಲೆ ನೀಡಿದ್ದೀಯ ಎಂದು ಸುಳ್ಳು ಕೇಸು ದಾಖಲಿಸಿ ಜೈಲಿಗೆ ಹಾಕಿಸುತ್ತೇನೆ ಎಂದು ಹೆದರಿಸಿ ಕಳಿಸಿರುತ್ತಾರೆ. ಇದು ಅಲ್ಲದೇ ಕಾರನ್ನು ಕಾನೂನುಬಾಹಿರವಾಗಿ ಗಿರವಿ ಇಟ್ಟುಕೊಂಡಿದ್ದ ಹುಣಸೂರಿನ ಆದಿಲ್ ಸಲೀಂ, ಕೆ.ಆರ್ ನಗರದ ಚಿರಾಗ್ ಹಾಗೂ ಮೈಸೂರಿನ ಗುರು ಎಂಬುವವರಿಂದ ಸರಿಯಾಗಿ ವಸೂಲಿ ಮಾಡಿಕೊಂಡಿದ್ದಾರೆ ಎಂಬ ಗುಸುಗುಸು ಗಾಳಿ ಮಾತು ಪೊಲೀಸ್ ಇಲಾಖೆಯಲ್ಲೇ ಹರಿದಾಡುತ್ತಿದೆ.
ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಬ್ದುಲ್ ಕರೀಂ ರಾವ್‌ತರ್ ರವರು ತಾವು ವಶಪಡಿಸಿಕೊಂಡು ಆರು ತಿಂಗಳುಗಳ ಕಾಲ ತಮ್ಮ ವೈಯಕ್ತಿಕ ಕೆಲಸಗಳಿಗೆ ಉಪಯೋಗಿಸಿಕೊಂಡ ಕಾರನ್ನು ಕಾನೂನುಬಾಹಿರವಾಗಿ ಗಿರವಿ ಇಟ್ಟುಕೊಂಡಿದ್ದ ಮೈಸೂರಿನ ಗುರು ಅವರಿಗೆ ಹಿಂದಿರುಗಿಸಿ ಕಾರಿನ ಮೂಲ ಮಾಲೀಕರಿಗೆ ಉಂಡೆ ನಾಮ ಇಟ್ಟು ಕಾರಿನ ಮಾಲೀಕನಿಂದ ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಬ್ದುಲ್ ಕರೀಂ ರಾವ್‌ತರ್‌ರವರು ಪಡೆದುಕೊಂಡಿದ್ದ ಮೂಲ ದಾಖಲಾತಿಗಳನ್ನು ಕಾರಿನೊಂದಿಗೆ ಮೈಸೂರಿನ ಗುರು ಎಂಬುವವರಿಗೆ ಹಿಂದಿರುಗಿಸಿರುತ್ತಾರೆ.
ಈ ಕೂಡಲೇ ದಾಖಲಿಸಿಕೊಂಡಿರುವ ದೂರಿಗೆ ಪ್ರತಿಯಾಗಿ ಕಾರ್ಯಪ್ರವರ್ತರಾಗಿ ಮೊದಲನೆಯದಾಗಿ ಕಾರನ್ನು ಸ್ನೇಹಿತನಿಂದ ಪಡೆದು ನಕಲಿ ದಾಖಲೆಗಳ ಮೂಲಕ ಗಿರವಿ ಇಟ್ಟ ನಯೀಮ್ ಮತ್ತು ಅವರಿಂದ ತಪ್ಪೊಪ್ಪಿಗೆ ಮುಚ್ಚಳಿಕೆಯನ್ನು ಬರೆಸಿಕೊಂಡು ಕಾನೂನುಬಾಹಿರವಾಗಿ ಅಕ್ರಮ ಕೆಲಸ ಮಾಡಿರುವ ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳ ಕಛೇರಿಯ ಸಿಬ್ಬಂದಿಗಳಾದ ಪ್ರಭಾಕರ್ ಮತ್ತು ಕಾರನ್ನು ವಶಪಡಿಸಿಕೊಳ್ಳಲು ಮತ್ತು ಹಣ ವಸೂಲಿ ಸೇರಿದಂತೆ ಇತರೆ ಕಾನೂನುಬಾಹಿರ ಕೆಲಸಗಳಿಗೆ ಸಹಕಾರ ನೀಡಿರುವ ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳ ಇನ್ನಿತರ ಸಿಬ್ಬಂದಿಗಳ ವಿರುದ್ದ ಹಿರಿಯ ಅಧಿಕಾರಿಗಳು ಕೂಡಲೇ ಶಿಸ್ತು ಕ್ರಮ ಕೈಗೊಳ್ಳದೇ ಇದ್ದರೇ ಇನ್ನಷ್ಟು ಅಮಾಯಕರು ಮೈಸೂರು ಗ್ರಾಮಾಂತರ ವಿಭಾಗದ ಉಪ ಪೊಲೀಸ್ ವರಿಷ್ಟಾಧಿಕಾರಿಗಳಾದ ಅಬ್ದುಲ್ ಕರೀಂ ರಾವ್‌ತರ್ ಮತ್ತು ಅವರ ಸಿಬ್ಬಂದಿಗಳಿಂದ ಮೋಸ ಹೋಗುವುದು ತಪ್ಪುವುದಿಲ್ಲ.
ಈ ಘಟನೆಯು ಕೇವಲ ಮಹಮ್ಮದ್ ಫಯಾಜ್ ಮಾತ್ರವಲ್ಲ, ಸಾಮಾನ್ಯ ಪ್ರಜೆಗಳಿಗೂ ಎಚ್ಚರಿಕೆಯ ಸಂದೇಶ. ಸ್ನೇಹಿತನ ನಂಬಿಕೆ ದುರುಪಯೋಗ ಮಾಡಿದ ನಯೀಮ್ ಉಲ್ಲಾ ಶರೀಫ್, ಅಕ್ರಮವಾಗಿ ಕಾರನ್ನು ಗಿರವಿಗೆ ಇಟ್ಟುಕೊಂಡ ಆದಿಲ್ ಸಲೀಮ್, ಕೆ.ಆರ್ ನಗರದ ಚಿರಾಗ್ ಮತ್ತು ಮೈಸೂರಿನ ಗುರು ಹಾಗೂ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಹಿಡಿತ ಇಟ್ಟುಕೊಂಡಂತೆ ಸಮಾಜದಲಿ ಬಿಂಬಿಸಿಕೊಳ್ಳುವ ಇಂಡಿಯನ್ ಡ್ರೈವಿಂಗ್ ಸ್ಕೂಲ್ ಮಾಲೀಕ ಸಾಜಿದ್ ರವರ ವಿರುದ್ಧ ಕಾನೂನಿನನ್ವಯ ಸೂಕ್ತ ಕ್ರಮ ಕೈಗೊಳಬೇಕು. ಸ್ನೇಹದ ಹೆಸರಿನಲ್ಲಿ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಕಮೀಷನ್ ಆಸೆಗಾಗಿ ಪೊಲೀಸರ ಹೆಸರಿನಲ್ಲಿ ದ್ರೋಹ ಮಾಡುವುದನ್ನು ಇಂಡಿಯನ್ ಡ್ರೈವಿಂಗ್ ಸ್ಕೂಲ್ ಮಾಲೀಕ ಸಾಜಿದ್ ಕೂಡಲೇ ನಿಲ್ಲಿಸಬೇಕು ಎಂಬುದನ್ನು ಈ ಘಟನೆಯು ಸ್ಪಷ್ಟಪಡಿಸುತ್ತದೆ. ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ದರೆ ಬಹಳ ಕಷ್ಟವಾದಿತು.














