ಮಡಿಕೇರಿ : ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವ್ಯಕ್ತಿಯೊಬ್ಬರ ಶವ ಸಕಲೇಶಪುರದ ಬಳಿ ಶಂಕಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಸಂಪತ್ ಅಲಿಯಾಸ್ ಶಂಭು ಎಂದು ಗುರುತಿಸಲಾಗಿದೆ. ಅವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಕ್ಕೆಹೊಳೆ ಜಂಕ್ಷನ್ ನಿವಾಸಿಯಾಗಿದ್ದರು. ಶನಿವಾರದಂದು ಅವರು ಕುಶಾಲನಗರದ ಉದ್ಯಮಿ ಜಾನ್ ಅವರ ಕಾರನ್ನು ತೆಗೆದುಕೊಂಡು ಹೋಗಿದ್ದರು ಎಂಬ ಮಾಹಿತಿ ಲಭಿಸಿದೆ. ಬಳಿಕ ಅವರ ಮೊಬೈಲ್ ಸ್ವಿಚ್ಆಫ್ ಆಗಿದ್ದು, ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೋಲಿಸ್ ಠಾಣೆಗೆ ದೂರು ನೀಡಿದ್ದರು.
ಈ ನಡುವೆ, ಹಾಸನ ಜಿಲ್ಲೆಯ ಯಸಳೂರು ಹೋಬಳಿ, ಕಲ್ಲಹಳ್ಳಿ ಗ್ರಾಮದ ಜನವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ನಿಲ್ಲಿಸಿರುವ ಕಾರು ಜನರಲ್ಲಿ ಆತಂಕ ಉಂಟುಮಾಡಿತ್ತು. ತೋಟದ ಕೆಲಸಕ್ಕೆ ಕಾರು ಚಾಲಕರು ಜನರನ್ನು ಕರೆತಂದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣವೇ ಗ್ರಾಮಸ್ಥರು ಯಸಳೂರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದರು.
ಯಸಳೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಪಿಐ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳ ಪರಿಶೀಲನೆ ನಡೆಸಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆದಿದ್ದರು. ತನಿಖೆ ಮುಂದುವರೆದಂತೆ, ಕೊನೆಗೆ ಮಾಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಂಪತ್ ಅವರ ಶವ ಪತ್ತೆಯಾಯಿತು. ಶವದ ಸ್ಥಿತಿ ಹಾಗೂ ಸ್ಥಳೀಯ ಜನರ ಹೇಳಿಕೆಯ ಪ್ರಕಾರ, ಇದು ಹತ್ಯೆ ಪ್ರಕರಣವಾಗಿರುವ ಶಂಕೆ ತೀವ್ರವಾಗಿದೆ.
ಪೊಲೀಸರು ಸಂಪತ್ ಅವರ ಮೊಬೈಲ್ನಲ್ಲಿ ಬಂದ ಕರೆಗಳ ಮಾಹಿತಿ ಸಂಗ್ರಹಿಸಿದ್ದು, ಅವರೊಂದಿಗೆ ಆಗಾಗ ಗಲಾಟೆ ಆಗುತ್ತಿದ್ದ ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೆಲವರು ಊರು ಬಿಟ್ಟು ಹೋಗಿದ್ದು, ಇನ್ನು ಕೆಲವರು ಪೋಲಿಸ್ ಕರೆಗಳಿಗೆ ಸ್ಪಂದಿಸದೆ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಘಟನೆಯ ಬಗ್ಗೆ ಮಾತನಾಡಿದ ಸ್ಥಳೀಯರು, “ಇಲ್ಲಿ ಪ್ರವಾಸಿ ತಾಣಗಳಿರುವುದರಿಂದ ಅನೇಕ ಹೋಮ್ ಸ್ಟೇಗಳು ಇತ್ತಿಚೆಗೆ ಆರಂಭಗೊಂಡಿವೆ. ಅಪರಿಚಿತ ಜನರ ಹದಕೆಯಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ನಾವು ಭಯದ ವಾತಾವರಣದಲ್ಲಿ ಬದುಕಬೇಕಾಗಿದೆ” ಎಂದು ಅಶಂಕೆ ವ್ಯಕ್ತಪಡಿಸಿದರು.
ಸಂಪತ್ ಅವರು ಮಹಿಳೆಯ ಮೋಹದ ಬಲೆಗೆ ಸಿಲುಕಿ ಕೊಲೆಯಾದಿರಬಹುದು ಎಂಬ ಮಾತುಗಳು ಸ್ಥಳೀಯವಾಗಿ ಹರಡುತ್ತಿದ್ದು, ಪೋಲಿಸರು ಎಲ್ಲ ಆಂಗಲ್ನಿಂದ ತನಿಖೆ ಮುಂದುವರಿಸಿದ್ದಾರೆ. ಕೊಡಗು ಹಾಗೂ ಹಾಸನ ಜಿಲ್ಲೆಯ ಪೊಲೀಸರು ಈ ಸಂಬಂಧ ಕೇಸು ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಂತಿಮ ವರದಿ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.














