ಮೈಸೂರು:ಲೋಕಸಭಾ ಚುನಾವಣೆ ಹಿನ್ನೆಲೆ ಏಪ್ರಿಲ್ 26ರಂದು ಮತಗಟ್ಟೆಗಳಿಗೆ ತೆರಳಿ ತಪ್ಪದೇ ತಮ್ಮ ಮತವನ್ನು ಚಲಾಯಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹುಣಸೂರು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಪಂಜಿನ ಮೆರವಣಿಗೆ ಜಾಥಾವನ್ನು ಆಯೋಜಿಸಲಾಗಿತ್ತು.
ಕಲ್ಕುಣಿಕೆ ವೃತ್ತದ ಬಳಿಯಿರುವ ರಾಘವೇಂದ್ರ ಸ್ವಾಮಿ ಮಠದ ಮುಂಭಾಗದಿoದ ಆಯೋಜಿಸಲಾಗಿದ್ದ ಪಂಜಿನ ಮೆರವಣಿಗೆ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕರಾದ ಶಿವಕುಮಾರ ಪಂಜಿಗೆ ಬೆಳಕು ಹತ್ತಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮತದಾನದ ದಿನದಂದು ಯಾವುದೇ ರೀತಿಯ ಸಮಸ್ಯೆಗಳಾಗದಂತೆ ನೋಡಿಕೊಳ್ಳುವಂತೆ, ಗ್ರಾಮ ಪಂಚಾಯಿತಿಗಳಲ್ಲಿ ಶೇ. 100 ರಷ್ಟು ಮತದಾನವಾಗುವಂತೆ ಎಲ್ಲಾ ಅಧಿಕಾರಿಗಳು ಕ್ರಮ ವಹಿಸುವಂತೆ ಹಾಗೂ ಮತದಾರರನ್ನು ಮತಗಟ್ಟೆಗಳ ಕಡೆಗೆ ಕರೆತರಲು ಸೂಕ್ತ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಜಾಥಾದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ, ಮರೆಯದಿರಿ ಏಪ್ರಿಲ್ 26ರಂದು ಮರೆಯದಿರಿ, ನಮ್ಮ ಮತ ನಮ್ಮ ಹಕ್ಕು ಹೀಗೆ ಸಾರ್ವಜನಿಕರು ಕಡ್ಡಾಯವಾಗಿ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಎಲ್ಲೆಲ್ಲಿ ಮೆರವಣಿಗೆ: ಪಂಜಿನ ಮೆರವಣಿಗೆಯ ಕಾಲ್ನಡಿಗೆ ಜಾಥಾವು ರಾಘವೇಂದ್ರ ಸ್ವಾಮಿ ದೇವಸ್ಥಾನದಿಂದ ಹೊರಟು ಕೆಹೆಚ್ಬಿ ಕಾಲೋನಿ, ಮರೂರಮ್ಮ ಕಾಲೋನಿ ಮಾರ್ಗವಾಗಿ ಹಾರಂಗಿ ಕಛೇರಿ, ಉಪವಿಭಾಗಾಧಿಕಾರಿಗಳ ವಸತಿ ಗೃಹದ ರಸ್ತೆ, ಪೊಲೀಸ್ ವಸತಿ ಗೃಹ ಹಾಗೂ ಸದಾಶಿವಯ್ಯನ ಕೊಪ್ಪಲು ಮಾರ್ಗವಾಗಿ ಕಲ್ಕುಣಿಕೆ ವೃತ್ತದಲ್ಲಿ ಅಂತ್ಯಗೊoಡಿದ್ದು, ವಾರ್ಡ್ ನಂ 1 ರಿಂದ 9 ರಲ್ಲಿರುವ ಮತಗಟ್ಟೆ ಸಂಖ್ಯೆ 129 ರಿಂದ 141ರಲ್ಲಿನ ನಿವಾಸಿಗಳಿಗೆ ಮತದಾನದ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಎಂ.ಎಸ್.ರಾಜೇಶ್, ವ್ಯವಸ್ಥಾಪಕರಾದ ಮಹೇಶ್ ನಾಯಕ್, ಸಹಾಯಕ ನಿರ್ದೇಶಕರಾದ ಗಿರಿಧರ್, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾದ ಚಂದ್ರಶೇಖರ್, ಲೋಕೇಶ್, ನಗರಸಭೆ ಸ್ವೀಪ್ ನೋಡಲ್ ಅಧಿಕಾರಿಯಾದ ಸೋಮಸುಂದರ್, ಶಶಿ, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರವಸೂಲಿಗಾರರು, ಕಂಪ್ಯೂಟರ್ ಆಪರೇಟರ್‌ಗಳು, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.