ಮಂಡ್ಯ: ಸೀಟ್ ಬೆಲ್ಟ್ ಧರಿಸದೇ 36 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಗೂಡ್ಸ್ ವಾಹನ ಚಾಲಕನಿಗೆ ಮಂಡ್ಯದ ಸಂಚಾರ ಪೊಲೀಸರು ಬರೋಬ್ಬರಿ ₹18 ಸಾವಿರ ದಂಡ ವಿಧಿಸಿದ್ದಾರೆ.
ಮೈಸೂರು ನಗರದ ನೋಂದಣಿ ಹೊಂದಿದ್ದ ಗೂಡ್ಸ್ ವಾಹನದಲ್ಲಿ ಗ್ಯಾಸ್ ಸಿಲಿಂಡರ್‌ಗಳನ್ನು ಸರಬರಾಜು ಮಾಡಲಾಗುತ್ತಿತ್ತು.
ಈ ಚಾಲಕ ಪ್ರತಿ ಬಾರಿ ವಾಹನ ಚಲಾಯಿಸುವಾಗಲೂ ಸೀಟ್ ಬೆಲ್ಟ್ ಧರಿಸದೇ ಇರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
‘ಒಂದು ಬಾರಿಯ ಉಲ್ಲಂಘನೆಗೆ ₹500ರಂತೆ, 36 ಬಾರಿ ಉಲ್ಲಂಘನೆಗೆ ₹18 ಸಾವಿರ ದಂಡ ಹಾಕಿದ್ದೇವೆ. ಚಾಲಕ ಮಂಗಳವಾರ ದಂಡ ಪಾವತಿಸಿ ರಸೀದಿ ಪಡೆದಿದ್ದಾನೆ. ದಂಡ ತೆತ್ತ ಚಾಲಕನಿಗೆ ಸಂಚಾರ ಪೊಲೀಸರು ಎಚ್ಚರಿಕೆ ನೀಡಿ, ಸಂಚಾರ ನಿಯಮ ಪಾಲಿಸುವಂತೆ ತಿಳಿವಳಿಕೆ ನೀಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.