ಮನೆ ರಾಜ್ಯ ಕಾವೇರಿ ನೀರಿಗಾಗಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಮಂಡ್ಯ ರೈತರು

ಕಾವೇರಿ ನೀರಿಗಾಗಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಮಂಡ್ಯ ರೈತರು

0

ಮಂಡ್ಯ:ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಶಿಪಾರಸು ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮಂಡ್ಯದಲ್ಲಿ ಸರದಿ ಉಪವಾಸ ಆರಂಭಿಸಿದೆ.
ನಗರದ ಸರ್.ಎಂ.ವಿ.ಪ್ರತಿಮೆ ಎದುರು ಕಳೆದ 82 ದಿನಗಳಿಂದ ನಿರಂತರ ಧರಣಿ ನಡೆಸಿದರೂ ನಿರಂತರ ಅನ್ಯಾಯ ಆಗುತ್ತಿರುವುದರಿಂದ ಹೋರಾಟ ತೀವ್ರ ಗೊಳಿಸಿದ್ದು, ಶನಿವಾರದಿಂದ ಸರದಿ ಉಪವಾಸ ಆರಂಭಿಸಿತು.

ರೈತ ಸಂಘದ ಮುಖಂಡ ಗುನ್ನ ನಾಯಕನಹಳ್ಳಿ ಮುದ್ದೇಗೌಡ, ಪಣಕನಹಳ್ಳಿ ಬೋರಲಿಂಗೇಗೌಡ, ದೊಡ್ಡ ಗರುಡನಹಳ್ಳಿ ಕೃಷ್ಣೇಗೌಡ,ಕಿರಂಗೂರು ಪಾಪು,ಪಣಕನಹಳ್ಳಿ ಪಿ.ಜಿ ನಾಗೇಂದ್ರ, ಸಿದ್ದಯ್ಯನಕೊಪ್ಪಲು ಎಸ್,ಕೆ ರಾಮಕೃಷ್ಣ ಮೊದಲ ದಿನದಲ್ಲಿ ಉಪವಾಸ ನಡೆಸಿ ಕಾವೇರಿ ವಿಚಾರದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೂರಿದೆ,ಕುಡಿಯುವ ನೀರಿಗೂ ಹಾಹಾಕಾರದ ಪರಿಸ್ಥಿತಿ ಇದೆ, ಆದರೂ ಸಹ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ನೀರು ಹರಿಸಿ ಎಂದು ವೈಜ್ಞಾನಿಕವಾಗಿ ಆದೇಶ ಮಾಡುತ್ತಿವೆ.ರಾಜ್ಯಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸದೆ ಏಕಪಕ್ಷೀಯವಾಗಿ ತಮಿಳುನಾಡಿನ ಹಿತ ಕಾಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಮಾತನಾಡಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಸಂಕಷ್ಟದಲ್ಲಿದೆ,ಮಳೆ ಕೊರತೆ ಎದುರಾಗಿ ಬರಗಾಲದ ಪರಿಸ್ಥಿತಿ ಉಲ್ಬಣಸಿದೆ, ಜಲಾಶಯಗಳಲ್ಲಿ ನೀರಿನ ಮಟ್ಟ ತಳ ಕಾಣುತ್ತಿದೆ, ಆದರೂ ಸಹ ಕರ್ನಾಟಕ ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿದೆ, ಮುಖ್ಯಮಂತ್ರಿ,ನೀರಾವರಿ ಸಚಿವರು ತುಟಿ ಬಿಚ್ಚುತ್ತಿಲ್ಲ,ಮೌನಕ್ಕೆ ಶರಣಾಗಿ ಹೊಣೆಗಾರಿಕೆಯಿಂದ ವಿಮುಖರಾಗಿದ್ದಾರೆ ಎಂದು ಹೇಳಿದರು.
ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಸರ್ಕಾರ ಕಾವೇರಿ ನೀರು ಸಂರಕ್ಷಿಸಿ ಕೊಳ್ಳಲು ಮುಂದಾಗಿಲ್ಲ. ಮತ್ತೊಂದೆಡೆ ಕಾನೂನಾತ್ಮಕ ಚಟುವಟಿಕೆಯು ಕಾಣುತ್ತಿಲ್ಲ ಸರ್ಕಾರದ ಬೇಜವಾಬ್ದಾರಿತನದಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದರೂ ನೆರೆರಾಜ್ಯಕ್ಕೆ ನೀರು ಸ್ಥಗಿತ ಮಾಡುವುದಾಗಿ ದೃಢ ನಿಲುವು ಘೋಷಿಸಲಿಲ್ಲ,ಕಾನೂನಾತ್ಮಕವಾಗಿ ರಾಜ್ಯದ ಹಿತ ಕಾಪಾಡುವುದಾಗಿ ಹೇಳಿ ಹೋದರೂ ಆದರೆ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ, ವಿಧಾನಮಂಡಲದ ಜಂಟಿ ಅಧಿವೇಶನ ಕರೆದು ಕಾವೇರಿ ವಿಚಾರವಾಗಿ ಸಮಗ್ರವಾಗಿ ಚರ್ಚೆ ದಿಟ್ಟ ನಿಲುವಿಗೆ ಒತ್ತಾಯ ಮಾಡಿದ್ದೆವು ಅದಕ್ಕೂ ಸಹ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ರಾಜ್ಯಗಳ ನಡುವೆ ಜಲ ಸಂಘರ್ಷ ತಲೆದೂರಿರುವಾಗ ಕೇಂದ್ರ ಸರ್ಕಾರ ಸಂಧಾನಕ್ಕೂ ಮುಂದಾಗಿಲ್ಲ,ಆಳುವ ಸರ್ಕಾರಗಳು ಬೇಜವಾಬ್ದಾರಿ ಪ್ರದರ್ಶಿಸುತ್ತಿವೆ, ವಿಷಯ ಮತ್ತು ಸಮಸ್ಯೆ ಕುರಿತು ಚರ್ಚೆಗೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
ಚಳವಳಿಯನ್ನು ಕೈ ಬಿಡಿ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರ ಜೊತೆ ಮಾತುಕತೆ ನಡೆಸಿ ಕರ್ನಾಟಕದ ಹಿತ ಕಾಪಾಡಲು ಒತ್ತಾಯಿಸಲಿ, ಹೋರಾಟ ರೂಪಿಸುವುದು ಸುಲಭದ ಮಾತಲ್ಲ, ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರಿಸುವ ಮೂಲಕ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್. ಕನ್ನಡ ಸೇನೆ ಮಂಜುನಾಥ್,ನಾರಾಯಣ್. ಬದರಿ ನಾರಾಯಣ್,ಸಿ.ಟಿ.
ಮಂಜುನಾಥ್, ಎಂ.ಎಲ್. ತುಳಸೀಧರ್ ನೇತೃತ್ವ ವಹಿಸಿದ್ದರು

ಹಿಂದಿನ ಲೇಖನನ.29 ರಿಂದ ಡಿಸೆಂಬರ್ 1ರವರೆಗೆ ಬೆಂಗಳೂರು ಟೆಕ್ ಸಮ್ಮಿಟ್: ಸಚಿವ ಪ್ರಿಯಾಂಕ್ ಖರ್ಗೆ
ಮುಂದಿನ ಲೇಖನಸರ್ಕಾರವನ್ನು ಡಿ.ಕೆ ಶಿವಕುಮಾರ್ ಕೈಗೊಂಬೆ ಮಾಡಿಕೊಂಡಿದ್ದಾರೆ: ಶ್ರೀರಾಮುಲು ಕಿಡಿ