ಮಂಡ್ಯ: ಪಾಂಡವಪುರದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಗೆ ಅನಧಿಕೃತವಾಗಿ ಗರ್ಭಪಾತ ಮಾಡಿದ 7ಮಂದಿ ವಿರುದ್ಧ ಕಾನೂರು ರೀತಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಮಂಡ್ಯ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ದೂರು ದಾಖಲಿಸಿದ್ದಾರೆ.
ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ರಕ್ತಸ್ರಾವ ಹಾಗೂ ಹೊಟ್ಟೆನೋವೆಂದು ಮಾಲಾಶ್ರೀ ಎಂಬ ಮಹಿಳೆ ತನ್ನ ತಾಯಿ ಮೈನಾವತಿ ಅವರೊಂದಿಗೆ ಆಗಮಿಸಿ, ಒಳರೋಗಿಯಾಗಿ ದಾಖಲಾಗಿದ್ದಾರೆ.
ಈ ವೇಳೆ ಮಹಿಳಾ ತಜ್ಞೆ ಡಾ.ಶಿಲ್ಪಶ್ರೀ ಎಂ. ಕೆ ಅವರು ರಕ್ತಸ್ರಾವ ಬಗ್ಗೆ ಮಾಲಾಶ್ರೀ ಅವರಲ್ಲಿ ವಿಚಾರಿಸಿದಾಗ ಏಪ್ರಿಲ್ 16 ರಂದು ಪಾಂಡವಪುರ ತಾಲ್ಲೂಕು ಮೇಲುಕೋಟೆ ಹೋಬಳಿ ಹೊಸಕೋಟೆ ಗ್ರಾಮದಲ್ಲಿ ಹಿರೇಮರಳಿಯ ಗೀತಾ ಅವರು ಕೆ.ಆರ್.ಪೇಟೆಯ ಶೃತಿ ಎಂಬುವವರನ್ನು ಪಾಂಡವಪುರ ತಾಲ್ಲೂಕು ಮೇಲುಕೋಟೆ ಹೋಬಳಿ ಹೊಸಕೋಟೆ ಗ್ರಾಮದಲ್ಲಿ ಕರೆಯಿಸಿಕೊಂಡು, ನನ್ನನ್ನು (ಮಾಲಾಶ್ರೀ) ಅವರನ್ನು ಯಾವುದೋ ಮನೆಗೆ ಕರೆದುಕೊಂಡು ಹೋಗಿ ಅನಧಿಕೃತವಾಗಿ ನನಗೆ ಮಾತ್ರೆಗಳನ್ನು ನುಂಗಲು ನೀಡಿದ್ದರು.
ನಂತರ ನನ್ನ ಹೊಟ್ಟೆಯಲ್ಲಿದ್ದ ಹೆಣ್ಣುಭ್ರೂಣವನ್ನು ಬೆಳಿಗ್ಗೆ 8.30 ಕ್ಕೆ ಗರ್ಭಪಾತ ಮಾಡಿದ್ದಾರೆ ಎಂದು ಮಹಿಳೆ ಮಾಹಿತಿ ನೀಡಿದ್ದಾರೆ.
ಬಳಿಕ ಗರ್ಭಪಾತ ಮಾಡಿದ್ದಕ್ಕಾಗಿ ಮಾಲಾಶ್ರೀ, ಚೇತನ್ ಕುಮಾರ್ ಗೆ 18 ಸಾವಿರ ರೂ., ಆಶಾ ಶಿವರಾಜ್ ಗೆ 1 ಸಾವಿರ ರೂ. ಗಳನ್ನು ಫೋನ್ ಪೇ ಮೂಲಕ ನೀಡಿದ್ದು, ಗೀತಾನಿಗೆ 13 ಸಾವಿರ ರೂ. ನೀಡಲು ಸ್ಕ್ಯಾನಿಂಗ್ ಮಾಡಿದ ಅಭಿಗೆ ಹಣವನ್ನು ನೀಡಿದ್ದಾರೆ. ಗರ್ಭಪಾತ ಮಾಡಿ ಹೊರ ತೆಗೆದ ಹೆಣ್ಣು ಭ್ರೂಣವನ್ನು ಮಹದೇಶ್ವರ ಗ್ರಾಮದಲ್ಲಿ ಮಾಲಾಶ್ರೀ ಅವರ ಚಿಕ್ಕಮ್ಮನ ಜಮೀನಿನಲ್ಲಿ ಹೂತು ಹಾಕಿರುವುದಾಗಿ ಮೌಖಿಕವಾಗಿ ತಿಳಿಸಿದ್ದಾರೆ.
ಸದರಿ ವಿಚಾರವನ್ನು ಪ್ರಸೂತಿ ತಜ್ಞೆ ಡಾ.ಶಿಲ್ಪಶ್ರೀ ಹಾಗೂ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅರವಿಂದ ಸಿ.ಎ ಮಂಡ್ಯ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ಅವರಿಗೆ ತಿಳಿಸಿದ್ದಾರೆ.
ಆದ್ದರಿಂದ ಅನಧಿಕೃತ ಗರ್ಭಪಾತ ಮಾಡುವುದು ಕಾನೂನು ಬಾಹಿರವಾಗಿರುವುದರಿಂದ ಗೀತಾ, ಶೃತಿ,ಚೇತನ್ ಕುಮಾರ್, ಆಶಾ ಶಿವರಾಜ್, ಅಭಿ ಹಾಗೂ ಮಾಲಾಶ್ರೀಯವರ ಗಂಡನಾದ ರವಿಕುಮಾರ್ ಹಾಗೂ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮಂಡ್ಯ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ ದೂರಿನಲ್ಲಿ ಒತ್ತಾಯಿಸಿದ್ದಾರೆ.