ಮಂಡ್ಯ (Mandya): ಮಾಜಿ ಶಾಸಕ ಕೆ.ಕೆಂಪೇಗೌಡ(96) ವಯೋಸಹಜವಾಗಿ ಬುಧವಾರ ಬೆಳಗ್ಗೆ ನಿಧನರಾಗಿದ್ದು, ಇವರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3 ರಿಂದ 4ಗಂಟೆಯೊಳಗೆ ಪಾಂಡವಪುರ ತಾಲೂಕು ಚಿನಕುರಳಿಯಲ್ಲಿ ನಡೆಯಲಿದೆ.
ಮೃತರು ನಾಲ್ಕು ಗಂಡುಮಕ್ಕಳು, ಐದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಕೆಂಪೇಗೌಡ ಅವರು ಮೂರು ಬಾರಿ ಶಾಸಕರಾಗಿ ಜನಮನ್ನಣೆ ಗಳಿಸಿದ್ದರು. ತಾಲೂಕು ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ವ್ಯವಸಾಯೋತ್ಪನ್ನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಗೌಡರು, 1983ರಲ್ಲಿ ಚಿನಕುರಳಿ ಗ್ರಾಮದ ಛೇರ್ ಮನ್ ಆಗಿ 1983 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 1985 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಎರಡನೇ ಬಾರಿ ಚುನಾಯಿತರಾಗಿದ್ದರು.
ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು 1999ರಲ್ಲಿ ಮೂರನೇ ಬಾರಿಗೆ ಶಾಸಕರಾಗಿದ್ದರು. 2008 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.
ಕೆಂಪೇಗೌಡರ ನಿಧನಕ್ಕೆ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ರೈತನಾಯಕಿ ಸುನಿತಾ ಪುಟ್ಟಣ್ಣಯ್ಯ, ಹಿರಿಯ ಮುಖಂಡ ಸಿ.ಅಣ್ಣೇಗೌಡ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಸಂತಾಪ ಸೂಚಿಸಿದ್ದಾರೆ.