ಮಂಡ್ಯ(Mandya): ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಶುಕ್ರವಾರ ಬೆಳಗ್ಗೆ ಜಿಲ್ಲೆಗೆ ಆಗಮಿಸಿದ್ದು, ಗೆಜ್ಜಲಗೆರೆ ಗ್ರಾಮದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮೆಗಾ ಡೇರಿಯನ್ನು ಉದ್ಘಾಟಿಸಿದರು.
ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದ ಹೆಲಿಪ್ಯಾಡ್’ಗೆ ಬೆಳಿಗ್ಗೆ 11.15ಕ್ಕೆ ಆಗಮಿಸಿದರು. ನಂತರ ಕಾರ್ಯಕ್ರಮಕ್ಕೆ ತೆರಳಿದರು.
ಮನ್ ಮುಲ್ ಆವರಣದಲ್ಲಿ 5 ಎಕರೆ ಜಾಗದಲ್ಲಿ ಡೇರಿ ನಿರ್ಮಾಣವಾಗಿದೆ. 260 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣವಾಗಿದ್ದು, ಕಟ್ಟಡದ ಹೊರ ಬಾಗದಲ್ಲಿ 4 ಬೃಹತ್ ಹಾಲು ಸಂಗ್ರಹಣಾ ಟ್ಯಾಂಕ್ ಇದೆ. ತಲಾ ಒಂದೂವರೆ ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ. ಇದು ರಾಜ್ಯದ 2ನೇ ಅತಿದೊಡ್ಡ ಮೆಗಾ ಡೈರಿಯಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಸೇರಿದಂತೆ ಮತ್ತಿತರರಿದ್ದರು.
ಇದಕ್ಕೂ ಮುನ್ನ ಹೆಲಿಪ್ಯಾಡ್’ಗೆ ಭೇಟಿ ನೀಡಿದ ಎಸ್’ಬಿಜಿ ಭದ್ರತಾ ತಂಡ ಹುಲಿಗೆರೆ ಪುರ ಹಾಗೂ ಮಂಡ್ಯದ ಪಿಇಎಸ್ ಕ್ರೀಡಾಂಗಣದ ಹೆಲಿಪ್ಯಾಡ್ ಅನ್ನು ಪರಿಶೀಲನೆ ನಡೆಸಿದರು.