ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಟ ಮಂಡ್ಯ ರಮೇಶ್ ಸ್ವಚ್ಛತಾ ರಾಯಭಾರಿ ಆಗಲು ಆಹ್ವಾನ ನೀಡಲಾಗಿತ್ತು. ಪಾಲಿಕೆಯ ಆಹ್ವಾನವನ್ನು ಮಂಡ್ಯ ರಮೇಶ್ ಖುಷಿಯಿಂದ ಒಪ್ಪಿಕೊಂಡಿದ್ದು, ಸ್ವಚ್ಚತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಭರವಸೆಯನ್ನು ಅವರು ನೀಡಿದ್ದಾರೆ.
ಮೈಸೂರು ನಗರ 2015, 2016ರಲ್ಲಿ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ, ನಂತರದ ವರ್ಷಗಳಲ್ಲಿ ಮೈಸೂರಿಗೆ ಮೊದಲ ಸ್ಥಾನ ಸಿಕ್ಕಿಲ್ಲ. 2021ನೇ ಸಾಲಿನ ಸ್ವಚ್ಛ ನಗರಗಳ ವಿಭಾಗದಲ್ಲಿ 11ನೇ ಸ್ಥಾನಕ್ಕೆ ಜಾರಿತ್ತು. ಈ ಮೂಲಕ ಟಾಪ್ 10 ಪಟ್ಟಿಯಿಂದ ಹೊರಬಿತ್ತು. 2022ರಲ್ಲಿ ಸ್ವಚ್ಛ ನಗರ ಸ್ಥಾನದಲ್ಲಿ 8ನೇ ಸ್ಥಾನ ಸಿಕ್ಕಿತ್ತು. ಈಗ ಮತ್ತೆ ನಂಬರ್ 1 ಸ್ಥಾನ ಪಡೆಯಲು ಮೈಸೂರು ಪಾಲಿಕೆ ಪ್ರಯತ್ನ ನಡೆಸುತ್ತಿದೆ.
ಸ್ವಚ್ಛತಾ ರಾಯಭಾರಿ ಆಗಿರುವ ಬಗ್ಗೆ ಮಂಡ್ಯ ರಮೇಶ್ ಅವರು ಮಾತನಾಡಿ, ಮೈಸೂರು ಅಂದ್ರೆ ನಿಮಗೂ ಇಷ್ಟ, ನನಗೂ ಇಷ್ಟ ಎಲ್ಲರಿಗೂ ಇಷ್ಟ. ಮೈಸೂರು ಪರಂಪರೆಯ ಕಾರಣಕ್ಕಾಗಿ, ಅದಕ್ಕಿರುವ ಸ್ವಚ್ಛ ಸುಂದರ ಕಾರಣಕ್ಕಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮೈಸೂರಿನ ಹೆಸರು ಹೇಳಿದರೆ ಒಮ್ಮೆ ಹುಬ್ಬೇರಿಸುತ್ತಾರೆ. ಎಲ್ಲರೂ ಮೈಸೂರು ನಗರಕ್ಕೆ ಸ್ವಚ್ಛ ನಗರ ಎಂಬ ಮತ ನೀಡಿ ಎಂದು ಕೋರಿದ್ದಾರೆ.