ಮಂಡ್ಯ:ಸಾಲ ಕೊಟ್ಟವರ ಕಾಟ ತಡೆಯಲಾರದೆ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್. ಪೇಟೆ ತಾಲ್ಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ನಡೆದಿದೆ
ಗ್ರಾಮದ ಲೋಹಿತ್‌ಕುಮಾರ್ ಅಲಿಯಾಸ್ ನವೀನ್ (35) ಆತ್ಮಹತ್ಯೆ ಮಾಡಿಕೊಂಡ ಯುವಕ.
ಕಳೆದ ವಾರ ಸಾಲ ಕೊಟ್ಟವರ ಕಾಟಕ್ಕೆ ಬೇಸತ್ತು ಕೆ.ಆರ್.ಪೇಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಶನಿವಾರ ಮುಂಜಾನೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
‘ಮನೆ ಬಳಿ ಬಂದು ಬಡ್ಡಿ ಕೊಡು ಎಂದು ಸಾಲ ಕೊಟ್ಟವರು ಕುತ್ತಿಗೆಪಟ್ಟಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದರು. ₹ 2 ಲಕ್ಷ ಸಾಲ ತೆಗೆದುಕೊಂಡಿದ್ದೆ. ಬಡ್ಡಿ ಸೇರಿ ಒಟ್ಟು ₹ 5 ಲಕ್ಷ ಕಟ್ಟಬೇಕಿದೆ. ಬಡ್ಡಿ ಕೊಡದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸಾಲ ತೀರಿಸಲು ನನಗೆ ಕಾಲಾವಕಾಶ ಕೊಡಿಸಿ’ ಎಂದು ಪೊಲೀಸರಿಗೆ ಲೋಹಿತ್ ದೂರು ನೀಡಿದ್ದ.
‘ಸಾಲ ಕೊಟ್ಟವರಿಗೆ ತಾಕೀತು ಮಾಡಿ, ಲೋಹಿತ್ ಸಾಲ ತೀರಿಸಲು ಒಂದು ತಿಂಗಳು ಕಾಲಾವಕಾಶ ಕೊಡಿಸಿದ್ದೆವು. ಅವಧಿಗೂ ಮುನ್ನವೇ ಲೋಹಿತ್ ಮನೆಗೆ ಹೋಗಿ ಮತ್ತೆ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮೈಕ್ರೊಫೈನಾನ್ಸ್‌ನವರಿಂದ ಲೋಹಿತ್ ಸಾಲ ಪಡೆದಿದ್ದ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಈ ಸಂಬಂಧ ಕೆ.ಆರ್.ಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














