ಛಿಂದ್ವಾರಾ (ಜೂನ್ 09) : ಮದುವೆ ಸಮಾರಂಭಗಳಲ್ಲಿ ನವ ಜೋಡಿ ಹರಸಿ ಅವರು ಕೊಟ್ಟಷ್ಟು ಹಣವನ್ನು ಪಡೆದು ಹೋಗುವ ಮಂಗಳಮುಖಿಯರು ಒಂದು ಕಡೆಯಾದರೆ, ಇತ್ತ ಪುರುಷರು ಮಂಗಳಮುಖಿಯರಂತೆ ವೇಷ ತೊಟ್ಟು ಮದುವೆ ಮನೆಯಲ್ಲಿ ಭಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಗುಂಪು ಇನ್ನೊಂದು ಕಡೆ. ಈ ಗುಂಪನ್ನು ಜನರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮದುವೆ ಹಾಗೂ ಇತರ ಮಂಗಳಕರ ಸಮಾರಂಭಗಳ ಸಂದರ್ಭದಲ್ಲಿ ಹಣದ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ನಕಲಿ ಗ್ಯಾಂಗ್ ಒಂದನ್ನು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ನಾಗರಿಕರು ಅತ್ಯಂತ ಜಾಣಾಕ್ಷತನದಿಂದ ಪತ್ತೆಹಚ್ಚಿದ್ದಾರೆ. ಜಿಲ್ಲೆಯ ಪರಸಿಯಾ ಪ್ರದೇಶದ ದರ್ಬಾಯ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಮಂಗಳಮುಖಿಯರಂತೆ ವೇಷ ಧರಿಸಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದ ಯುವಕರ ಅಸಲಿ ಮುಖವಾಡವನ್ನು ಸ್ಥಳೀಯರು ಬಯಲಿಗೆಳೆದಿದ್ದಾರೆ. ದರ್ಬಾಯ್ ಗ್ರಾಮದಲ್ಲಿ ವೈಭವದ ಮದುವೆ ಸಮಾರಂಭ ನಡೆಯುತ್ತಿದ್ದಾಗ, ಮಂಗಳಮುಖಿಯರಂತೆ ಉಡುಪು, ಮೇಕಪ್ ಮಾಡಿಕೊಂಡ ಪುರುಷರು ವಧು-ವರರ ಕುಟುಂಬಸ್ಥರ ಬಳಿ ದೊಡ್ಡ ಮೊತ್ತದ ಹಣವನ್ನು ನೀಡುವಂತೆ ಪಟ್ಟು ಹಿಡಿದರು ಎನ್ನಲಾಗಿದೆ.

ಆದರೆ, ಅವರ ವರ್ತನೆ ಮತ್ತು ಅತಿಯಾದ ಒತ್ತಾಯವು ಅಲ್ಲಿದ್ದ ಗ್ರಾಮಸ್ಥರಲ್ಲಿ ತೀವ್ರ ಅನುಮಾನವನ್ನು ಹುಟ್ಟುಹಾಕಿತು. ಗ್ರಾಮಸ್ಥರು ತಕ್ಷಣವೇ ಸ್ಥಳೀಯ ಮಂಗಳಮುಖಿಯರ ಸಮುದಾಯದ ಮುಖಂಡರಿಗೆ ಫೋನ್ ಮೂಲಕ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡರು. ಸ್ಥಳಕ್ಕೆ ಬಂದ ತೃತೀಯ ಲಿಂಗಿ ಸಮುದಾಯದ ಸದಸ್ಯರು ಈ ಅಪರಿಚಿತರ ಗುರುತನ್ನು ಪರಿಶೀಲಿಸಿದಾಗ, ಅವರು ಮಂಗಳಮುಖಿಯರಲ್ಲ ಬದಲಿಗೆ ಹಣದ ಆಸೆಗೆ ಸೀರೆ ಉಟ್ಟು ವೇಷ ಧರಿಸಿದ್ದ ಯುವಕರು ಎಂಬ ಆಘಾತಕಾರಿ ಸತ್ಯ ಬಹಿರಂಗವಾಯಿತು. ವಂಚನೆ ಸಂಪೂರ್ಣವಾಗಿ ಜಗಜ್ಜಾಹೀರಾಗುತ್ತಿದ್ದಂತೆ ಮದುವೆ ಮನೆಯಲ್ಲಿದ್ದ ಮಹಿಳೆಯರು ಮತ್ತು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಧಾರ್ಮಿಕ ನಂಬಿಕೆ ಹಾಗೂ ಸಾಂಪ್ರದಾಯಿಕ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ಮಹಿಳೆಯರು ಆ ನಕಲಿ ವ್ಯಕ್ತಿಗಳಿಗೆ ಕಪಾಳಮೋಕ್ಷ ಮಾಡಿ, ಅವರ ಮುಖವಾಡ ಮತ್ತು ವೇಷಭೂಷಣಗಳನ್ನು ಕಳಚಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪಕ್ಕದಲ್ಲಿದ್ದವರು ಇಡೀ ಘಟನೆಯನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಸಮಾಜಕ್ಕೆ ವಂಚಿಸುವ ಇಂತಹ ಗ್ಯಾಂಗ್‌ಗಳ ವಿರುದ್ಧ ಜಾಗರೂಕರಾಗಿರಲು ಈ ವಿಡಿಯೋ ನೆರವಾಗುತ್ತಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಈ ನಕಲಿ ಗ್ಯಾಂಗ್ ಈ ಹಿಂದೆಯೂ ಜಿಲ್ಲೆಯ ಹಲವಾರು ಮದುವೆಗಳು, ಮಗುವಿನ ಜನನ ಹಾಗೂ ಗೃಹಪ್ರವೇಶದಂತಹ ಆಚರಣೆಗಳಿಗೆ ಮಂಗಳಮುಖಿಯರಂತೆ ನಟಿಸುತ್ತಾ ನುಗ್ಗಿ, ಅಮಾಯಕ ಕುಟುಂಬಗಳಿಂದ ಸಾವಿರಾರು ರೂಪಾಯಿಗಳನ್ನು ದೋಚುತ್ತಿತ್ತು ಏಂಬುದ್ದಾಗಿ ತಿಳಿದುಬಂದಿದೆ.














