ಮಂಗಳೂರು(ದಕ್ಷಿಣ ಕನ್ನಡ): ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ಮಂಗಳೂರು ನಗರದ ಲಾಲ್ ಬಾಗ್ ನ ಸಾಯಿಬಿನ್ ಕಾಂಪ್ಲೆಕ್ಸ್ ನೆಲಮಹಡಿಯ ಮೂರು ಅಂಗಡಿಗಳಿಗೆ ಬರ್ಕೆ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೂಲತಃ ಸುಳ್ಯದ ಸ್ವಾತಿ, ಮಣ್ಣಗುಡ್ಡೆಯ ಶಿವಕುಮಾರ್, ಕುತ್ತಾರ್ ಸಮೀಪದ ಹಸನ್ ಶರೀಫ್ ಮತ್ತು ರಹಮತುಲ್ಲಾ ಎಂಬವರ ವಿರುದ್ಧ ಇ-ಸಿಗರೇಟ್ ನಿರ್ಬಂಧ ಹಾಗೂ ಕೊಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತರ ಪೈಕಿ ಇಬ್ಬರಿಗೆ ಠಾಣೆಯಲ್ಲೇ ಜಾಮೀನು ಲಭಿಸಿದ್ದರೆ, ಇನ್ನಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ಈ ಅಂಗಡಿಗಳಲ್ಲಿ ಕೇಂದ್ರ ಸರಕಾರ ನಿಷೇಧಿಸಿದ ಇ-ಸಿಗರೇಟ್ ಗಳನ್ನು ಅಕ್ರಮ ಮಾರಾಟ ಮಾಡಿದ್ದಲ್ಲದೆ ಸರ್ಕಾರದ ಎಚ್ಚರಿಕೆಯನ್ನು ನಮೂದಿಸದೆ ಕಾನೂನು ಬಾಹಿರವಾಗಿ ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಸುಮಾರು 2.70 ಲಕ್ಷ ರೂ.ಮೌಲ್ಯದ ಇ-ಸಿಗರೇಟ್ ಹಾಗೂ ವಿದೇಶಿ ಸಿಗರೇಟ್ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ನಾಗೇಶ್ ಹಸ್ಲರ್, ರೇಖಾ, ಶೋಭಾ, ಧರ್ಮಾವತಿ, ಸಿಬ್ಬಂದಿಗಳಾದ ರಾಘವೇಂದ್ರ, ಜಲಜಾಕ್ಷಿ, ನಿತೇಶ್, ಮಂಜುನಾಥ್, ಅಜಿತ್ ಕುಮಾರ್, ವಿಜಯ ಕುಮಾರ್, ಚೇತನ್ ಕುಮಾರ್, ರಾಮಲಿಂಗ, ಸಿದ್ದು, ಚಂದ್ರಿಕಾ ಪಾಲ್ಗೊಂಡಿದ್ದರು.