ಮಂಗಳೂರು(ದಕ್ಷಿಣ ಕನ್ನಡ): ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಯುವಕನನ್ನು ಕೊಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೇಟೆಯ ಹೊರವಲಯದ ನೆಹರು ನಗರದಲ್ಲಿ ತಡರಾತ್ರಿ ನಡೆದಿದೆ.
ಕೊಲೆಗೀಡಾದ ಯುವಕನನ್ನು ಅಕ್ಷಯ್ ಕಲ್ಲೇಗ ಎಂದು ಗುರುತಿಸಲಾಗಿದೆ.
ಈತ ಪುತ್ತೂರಿನ ಪ್ರಖ್ಯಾತ ಹುಲಿ ವೇಷ ಕುಣಿತ ತಂಡವಾಗಿರುಗ ಟೈಗರ್ಸ್ ಕಲ್ಲೇಗ ತಂಡದ ಸದಸ್ಯನಾಗಿದ್ದ.
ಘಟನೆಗೆ ಕೆಲ ಗಂಟೆಗಳ ಮೊದಲು ಕ್ಷುಲ್ಲಕ ಕಾರಣವೊಂದಕ್ಕೆ ಅಕ್ಷಯ್ ಹಾಗೂ ಕೃತ್ಯ ಎಸಗಿದ ತಂಡದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಅದರ ಮುಂದುವರಿದ ಭಾಗವಾಗಿ ಅಕ್ಷಯ್ ನನ್ನು ನೆಹರೂ ನಗರಕ್ಕೆ ಬರಲು ಹೇಳಿ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಜೆ ವೇಳೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್ ಹಾಗೂ ಎದುರಾಳಿ ತಂಡದ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದರ ನಷ್ಟದ ಬಾಬ್ತು ಮಾತನಾಡಲೆಂದು ಪುನ: ಅದೇ ತಂಡ ಅಕ್ಷಯ್ ನನ್ನು ರಾತ್ರಿ ವೇಳೆ ನೆಹರೂ ನಗರ ಬಳಿ ಕರೆದು ಕೃತ್ಯ ಎಸಗಿದೆ ಎನ್ನಲಾಗುತ್ತಿದೆ. ಅಕ್ಷಯ್ ಮೃತದೇಹ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಹೆದ್ದಾರಿಯ ಅಂಚಿನಲ್ಲಿರುವ ಗಿಡಗಂಟಿಗಳಿಂದ ಅವೃತ್ತವಾದ ಹಡೀಲು ಬಿದ್ದ ಜಾಗದಲ್ಲಿ ಬಿದ್ದು ಕೊಂಡಿತ್ತು. ಒಟ್ಟು ಮೂವರಿದ್ದ ತಂಡ ಕೃತ್ಯ ಎಸಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಈ ಪೈಕಿ ಇಬ್ಬರು ಕೃತ್ಯ ನಡೆದ ಕೆಲ ಗಂಟೆಯ ಬಳಿಕ ಮನೀಶ್ ಹಾಗೂ ಚೇತು ಎಂಬುವವರು ಪೊಲೀಸರಿಗೆ ಶರಣಾಗಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ ಮಂಜುನಾಥ್ ಯಾನೆ ಮಂಜ ಎಂಬಾತನನ್ನು ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ.