ಮಂಗಳೂರು: ಬೆಂಗಳೂರು ಸಿಐಡಿ ಪೊಲೀಸರ (ಅರಣ್ಯ ಘಟಕ) ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 125 ಕೆಜಿ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ರಕ್ತ ಚಂದನವನ್ನು ವೇಣೂರು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಆರೋಪಿಗಳನ್ನು ಗುರುವಾಯನಕೆರೆ ನಿವಾಸಿ ದೀಕ್ಷಿತ್ ಮತ್ತು ಮಾವಿನಕಟ್ಟೆಯ ಖಾಲಿದ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಸಂತೋಷ್ ತಲೆಮರೆಸಿಕೊಂಡಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಎಎಸ್‌ಐ ಜಾನಕಿ ನೇತೃತ್ವದ ಬೆಂಗಳೂರು ಅರಣ್ಯ ಸಂಚಾರಿ ದಳದ ತಂಡವು ರಕ್ತ ಚಂದನ ಮತ್ತು ಸಾಗಾಟಕ್ಕೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ವೇಣೂರು ವಲಯ ಅರಣ್ಯಾಧಿಕಾರಿ ಮಹಿಮ್ ಜನ್ನು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ. ವಶಪಡಿಸಿಕೊಂಡ ರಕ್ತ ಚಂದನ ಮತ್ತು ವಾಹನದ ಮೌಲ್ಯ ಸುಮಾರು 6.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.