ಮನೆ ಅಪರಾಧ ಮಂಗಳೂರು ಜ್ಯುವೆಲ್ಲರ್ಸ್‌ ಚಿನ್ನಾಭರಣ ಅಂಗಡಿಯಲ್ಲಿ ಕೊಲೆ ದರೋಡೆ ಪ್ರಕರಣ: ಆರೋಪಿ ಬಂಧನ

ಮಂಗಳೂರು ಜ್ಯುವೆಲ್ಲರ್ಸ್‌ ಚಿನ್ನಾಭರಣ ಅಂಗಡಿಯಲ್ಲಿ ಕೊಲೆ ದರೋಡೆ ಪ್ರಕರಣ: ಆರೋಪಿ ಬಂಧನ

0

ಮಂಗಳೂರು: ‘ಮಂಗಳೂರು ಜ್ಯುವೆಲ್ಲರ್ಸ್‌’ ಚಿನ್ನಾಭರಣ ಅಂಗಡಿಯಲ್ಲಿ ನಡೆದಿದ್ದ ಸಿಬ್ಬಂದಿ ಕೊಲೆ–ದರೋಡೆ ಪ್ರಕರಣದ ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ.

ಕೋಝಿಕ್ಕೋಡ್‌ನ ತುವಕೋಡ್‌ ನಿವಾಸಿ ಶಿಫಾಸ್ ಅಲಿ ಪಿಪಿ (30) ಬಂಧಿತ ಆರೋಪಿ.

ಕಾಸರಗೋಡು ಪೊಲೀಸರ ನೆರವಿನಿಂದ ಈತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಅಂಶುಕುಮಾರ್‌ ತಿಳಿಸಿದ್ದಾರೆ.

ಫೆಬ್ರುವರಿ 3ರಂದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯ (50) ಎಂಬವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ತಾನು ಊಟಕ್ಕೆ ಹೋಗಿ ಬರುವಷ್ಟರಲ್ಲಿ ಅಪರಿಚಿತ ಮುಸುಕುಧಾರಿ ಕೊಲೆ ಮಾಡಿ, ಚಿನ್ನಾಭರಣ ದೋಚಿದ್ದಾನೆ ಎಂದು ಅಂಗಡಿ ಮಾಲೀಕ ಕೇಶವ ಆಚಾರ್ಯ ಬಂದರು ಠಾಣೆಗೆ ದೂರು ಸಲ್ಲಿಸಿದ್ದರು.

ಆರೋಪಿ ಪತ್ತೆಗೆ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ, ಮೊಬೈಲ್‌ ಟವರ್‌ ನಲ್ಲಿ ದಾಖಲಾದ ಕರೆಗಳ ಮಾಹಿತಿ ವಿಶ್ಲೇಷಿಸಲು ಹಾಗೂ ವಿವಿಧ ಲಾಡ್ಜ್‌, ಹೋಟೆಲ್‌ ಗಳನ್ನು ಪರಿಶೀಲಿಸಲು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಕೇರಳ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿತ್ತು. ಆರೋಪಿಯನ್ನು ಕಾಸರಗೋಡಿನಲ್ಲಿ ಗುರುವಾರ ಪತ್ತೆಹಚ್ಚಲಾಗಿದೆ. ದರೋಡೆ ಉದ್ದೇಶದಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

ಎಂಜಿನಿಯರಿಂಗ್‌ ಕಲಿಕೆ: ಆರೋಪಿ ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌’ಗೆ ಪ್ರವೇಶ ಪಡೆದಿದ್ದ. ಎರಡು ವರ್ಷಗಳ ನಂತರ ಶಿಕ್ಷಣ ಮೊಟಕುಗೊಳಿಸಿದ್ದ ಎಂದು ಅವರು ಹೇಳಿದ್ದಾರೆ.