ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮುಂದುವರಿದ ಭಾರಿ ಮಳೆಯ ಪರಿಣಾಮ, ಗುಡ್ಡ ಕುಸಿತದಿಂದಾಗಿ ಭೀಕರ ದುರಂತ ಸಂಭವಿಸಿದೆ.
ಉಳ್ಳಾಲ ತಾಲೂಕಿನ ಉರುಮನೆ ಕೋಡಿಯಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ಅವಶೇಷಗಳಡಿ ಸಿಲುಕಿದ್ದ ತಾಯಿ ಅಶ್ವಿನಿ ಮತ್ತು ಮಗು ಆರುಷ್ ನನ್ನು ಎನ್ಡಿಆರ್ಎಫ್ ಸಿಬ್ಬಂದಿ 8 ಗಂಟೆಗಳ ಸತತ ಕಾರ್ಯಾಚರಣೆಯ ನಂತರ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಈ ಮಧ್ಯೆ, ಈ ಘಟನೆ ವೇಳೆ ಆರ್ಯನ್ ಎಂಬ ಬಾಲಕನು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಜೊತೆಗೆ ಮೋಂಟೆಪದವು ಬಳಿ ಮತ್ತೊಂದು ಗುಡ್ಡ ಕುಸಿತದಲ್ಲಿ ಪ್ರೇಮಾ ಪೂಜಾರಿ (52) ದುರ್ಮರಣಕ್ಕೀಡಾಗಿದ್ದಾರೆ.
ಮಂಗಳೂರಿನಲ್ಲಿ ಭಾರೀ ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಗುಡ್ಡ ಕುಸಿತಗಳ ಭೀತಿ ಇನ್ನೂ ಮುಂದುವರಿದಿದೆ.














