ಮನೆ ಕಾನೂನು ಹಳೆ ನಾಣ್ಯ ಖರೀದಿಸುವುದಾಗಿ ಜಾಹೀರಾತು: ₹58 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

ಹಳೆ ನಾಣ್ಯ ಖರೀದಿಸುವುದಾಗಿ ಜಾಹೀರಾತು: ₹58 ಲಕ್ಷ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

0

ಮಂಗಳೂರು: ಹಳೆಯ ನಾಣ್ಯಗಳ ಖರೀದಿ ನೆಪದಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 58 ಲಕ್ಷ ರೂ. ವಂಚಿಸಿದ ಘಟನೆ ನಡೆದಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Our Whatsapp Group

ದೂರಿನ ವಿವರ: ಮಂಗಳೂರಿನ ವ್ಯಕ್ತಿ 2024ರ ನವೆಂಬರ್ 25ರಂದು ಫೇಸ್​​ಬುಕ್ ನೋಡುತ್ತಿರುವಾಗ ಹಳೆಯ ನ್ಯಾಣ್ಯಗಳನ್ನು ಖರೀದಿಸಿ ಹೆಚ್ಚಿನ ಹಣ ನೀಡುವುದಾಗಿ ತಿಳಿಸಿರುವ ಜಾಹಿರಾತನ್ನು ನೋಡಿದ್ದಾರೆ. ಬಳಿಕ ಆ ಜಾಹಿರಾತಿನಲ್ಲಿದ್ದ ವಾಟ್ಸ್​ಆ್ಯಪ್ ಖಾತೆಗೆ ತಮ್ಮ ಬಳಿ ಇದ್ದ 15 ಹಳೆಯ ನ್ಯಾಣ್ಯಗಳ ಫೋಟೋಗಳನ್ನು ಕಳುಹಿಸಿದ್ದರು. ಅದರಂತೆ, ಆ ಕಡೆಯಿಂದ 15 ಹಳೆಯ ನ್ಯಾಣ್ಯಗಳನ್ನು ಖರೀದಿಸಿ, ಅದಕ್ಕೆ ಪ್ರತಿಯಾಗಿ 49,00,000 ರೂ. ಹಣ ನೀಡುವುದಾಗಿ ಆರೋಪಿ ತಿಳಿಸಿದ್ದ ಎಂದು ವಂಚನೆಗೊಳಗಾದವರು ದೂರಿನಲ್ಲಿ ತಿಳಿಸಿದ್ದಾರೆ.

ಬೇರೆ ಬೇರೆ ಶುಲ್ಕ ವಸೂಲಿ: ಬಳಿಕ, ನಾಣ್ಯ ಮಾರಲು ಇಷ್ಟವಿದ್ದರೆ ಮೊದಲಿಗೆ ಆರ್​​ಬಿಐ ನೋಂದಣಿ ಮಾಡಲು 750 ರೂ. ಹಣ ಪಾವತಿಸುವಂತೆ ಆರೋಪಿ ತಿಳಿಸಿದ್ದು, ವ್ಯಕ್ತಿಯು ಯುಪಿಐ ಮೂಲಕ ಪಾವತಿಸಿದ್ದರು. ಆ ಬಳಿಕ ಜಿಎಸ್​ಟಿ ಪ್ರೊಸಿಡಿಂಗ್​ ಡಾಟಾ ಶುಲ್ಕವೆಂದು 17,500 ರೂ., ಇನ್ಶೂರೆನ್ಸ್​ ಶುಲ್ಕ 94,500 ರೂ., ಟಿಡಿಎಸ್​ ಮೊತ್ತದ ಶುಲ್ಕ 49,499 ರೂ., ಜಿಪಿಎಸ್​​ ಶುಲ್ಕ 71,500 ರೂ., ಐಟಿಆರ್​​ ಶುಲ್ಕ 39,990 ರೂ. ಹಾಗೂ ಆರ್​ಬಿಐ ನೋಟಿಸ್​​ ಪೆಂಡಿಂಗ್ ಶುಲ್ಕವೆಂದು 3,50,000 ರೂ. ಹಣ ಪಾವತಿಸುವಂತೆ ಆರೋಪಿಯು ವಾಟ್ಸ್​ಆ್ಯಪ್ ನಂಬರ್​ಗೆ ಸಂದೇಶ ಕಳಿಸಿದ್ದಾನೆ. ಆತ ತಿಳಿಸಿದಂತೆ ತಾವು ಹಣವನ್ನು ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಂತರ, 2024ರ ಡಿಸೆಂಬರ್ 15ರಂದು ತಮ್ಮ ಮೊಬೈಲ್ ನಂಬರ್​​ಗೆ ಕರೆಯೊಂದು ಬಂದಿದ್ದು, ಆ ಕಡೆಯಿಂದ ವ್ಯಕ್ತಿ ತನ್ನನ್ನು ಮುಂಬೈ ಸೈಬರ್ ಪೊಲೀಸ್ ಆಯುಕ್ತ ಗೌರವ್ ಶಿವಾಜಿ ರಾವ್ ಶಿಂದೆ ಎಂಬುದಾಗಿ ಪರಿಚಯಿಸಿಕೊಂಡ. ಅಲ್ಲದೆ, ಆರ್​​ಬಿಐ ಕಡೆಯಿಂದ ನೋಟಿಸ್ ಬಂದಿದ್ದು, ನಿಮ್ಮನ್ನು ಬಂಧಿಸುತ್ತೇವೆ. ಆದ್ದರಿಂದ ಆರ್​​ಬಿಐ ಗೈಡ್​ಲೈನ್ಸ್ ಪ್ರಕಾರ 12,55,000 ರೂ. ಹಣ ಪಾವತಿಸಬೇಕು. ಬಳಿಕ ನಾವು ಚೆಕ್ ಮಾಡಿ, 1 ಗಂಟೆಯೊಳಗೆ ನಿಮ್ಮ ಖಾತೆಗೆ ಎಲ್ಲ ಹಣವನ್ನು ನಿಮಗೆ ವರ್ಗಾಯಿಸುತ್ತೇವೆ ಎಂದು ನಂಬಿಸಿದ್ದಾನೆ.

ಅದರಂತೆ, ಅಪರಿಚಿತ ಕರೆಯ ವ್ಯಕ್ತಿಯು ತಿಳಿಸಿದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸಂಶಯಪಟ್ಟು ಅವರನ್ನು ಪ್ರಶ್ನಿಸಿದಕ್ಕೆ ಅಪರಿಚಿತನು ಏಕಾಏಕಿ ಗದರಿಸಲು ಶುರು ಮಾಡಿದ್ದಾನೆ. ಇದೇ ರೀತಿ 2024ರ ನವೆಂಬರ್​ 25ರಿಂದ ಡಿ.30 ವರೆಗೆ ಅಪರಿಚಿತರು ಫೋನ್ ಕರೆ ಮಾಡಿ ಹಾಗೂ ವಾಟ್ಸ್​​ಆ್ಯಪ್​ ಖಾತೆಗೆ ಸಂದೇಶ ಕಳಿಸಿ, ಜಿಎಸ್​ಟಿ ಪ್ರೊಸೀಡಿಂಗ್​ ಡಾಟಾ, ಶುಲ್ಕ, ಇನ್ಶೂರೆನ್ಸ್​​ ಶುಲ್ಕ, ಟಿಡಿಎಸ್​ ಮೊತ್ತದ ಶುಲ್ಕ, ಜಿಪಿಎಸ್​​ ಶುಲ್ಕ, ಐಟಿಆರ್​ ಶುಲ್ಕ ಹಾಗೂ ಆರ್​ಬಿಐ ನೋಟಿಸ್​ ಪೆಂಡಿಂಗ್​ ಹಾಗೂ ಇತರೆ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿ, ಹಂತ-ಹಂತವಾಗಿ ಒಟ್ಟು 58,26,399 ರೂ. ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ತಮಗೆ ಮೋಸ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.