ಮನೆ ರಾಜಕೀಯ ಮಾವು ಬೆಲೆ ಕುಸಿತ: ಬೆಂಬಲ ಬೆಲೆ ನಿಗದಿಗೆ ಸಿಎಂ ಸಿದ್ದರಾಮಯ್ಯ ಕೇಂದ್ರ ಕೃಷಿ ಸಚಿವರಿಗೆ ಮನವಿ

ಮಾವು ಬೆಲೆ ಕುಸಿತ: ಬೆಂಬಲ ಬೆಲೆ ನಿಗದಿಗೆ ಸಿಎಂ ಸಿದ್ದರಾಮಯ್ಯ ಕೇಂದ್ರ ಕೃಷಿ ಸಚಿವರಿಗೆ ಮನವಿ

0

ಬೆಂಗಳೂರು : ರಾಜ್ಯದಲ್ಲಿ ಮಾವಿನ ಬೆಲೆ ತೀವ್ರವಾಗಿ ಕುಸಿದಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ತುರ್ತು ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಸುಮಾರು 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಹಣ್ಣು ಬೆಳೆಯಲಾಗುತ್ತಿದ್ದು, ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ 8 ರಿಂದ 10 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯ ನಿರೀಕ್ಷೆ ಇದೆ. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದ್ದು, ಆರ್ಥಿಕ ಸಂಕಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ.

ಹಿಂದಿನ ವರ್ಷ 1 ಕ್ವಿಂಟಲ್ ಮಾವಿಗೆ ₹12,000 ದರ ಇತ್ತು. ಆದರೆ ಈ ಬಾರಿ ಕೇವಲ ₹3,000 ಕ್ಕೆ ಇಳಿದಿದೆ. ಆದರೆ ರಾಜ್ಯ ಕೃಷಿ ಬೆಲೆ ಆಯೋಗವು ಪ್ರತಿಕ್ವಿಂಟಲ್ ಕೃಷಿ ವೆಚ್ಚವನ್ನು ₹5,466 ಎಂದು ನಿಗದಿಪಡಿಸಿದೆ. ಈ ದರದ ಅಂತರವು ಸಾವಿರಾರು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಬಂಡವಾಳವನ್ನೂ ಹಿಂಪಡೆಯಲಾಗದ ಸ್ಥಿತಿಯನ್ನು ಉಂಟುಮಾಡಿದೆ.

ಸಾಮಾನ್ಯವಾಗಿ ಮೇ–ಜುಲೈ ಅವಧಿಯಲ್ಲಿ ಮಾವಿನ ಸುಗ್ಗಿಯ ಸಮಯವಾಗಿದ್ದು, ಈ ಕಾಲದಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ ಆಗುತ್ತದೆ. ಬೆಲೆ ಇಳಿಕೆಯಿಂದಾಗಿ ಈಗ ರೈತ ಸಮುದಾಯ ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿದೆ.

ಸಿದ್ದರಾಮಯ್ಯ ಅವರು ತಮ್ಮ ಪತ್ರದಲ್ಲಿ, ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಅಡಿಯಲ್ಲಿ ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಅನ್ನು ಜಾರಿಗೆ ತರಬೇಕು ಎಂದು ಕೇಳಿಕೊಂಡಿದ್ದಾರೆ. ಈ ಯೋಜನೆಯಿಂದ ರೈತರು ಖರೀದಿ ಮೌಲ್ಯದಿಂದಲೂ ಹೊರತಾಗಿ ಆರ್ಥಿಕ ಪರಿಹಾರ ಪಡೆಯಬಹುದು.

ಇದಕ್ಕೊಂದಾಗಿ, ಕೇಂದ್ರ ಸರ್ಕಾರವು ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್ ನಂತಹ ಖರೀದಿ ಸಂಸ್ಥೆಗಳಿಗೆ ತಕ್ಷಣದ ನಿರ್ದೇಶನ ನೀಡಿ, ನಿರ್ಧಿಷ್ಟ ಬೆಂಬಲ ಬೆಲೆಯಲ್ಲಿ ಮಾವು ಖರೀದಿಯನ್ನು ಪ್ರಾರಂಭಿಸಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ.