ಇಂಫಾಲ: 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಣಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಗಿ ಭದ್ರತೆ ಮತ್ತು ಕೋವಿಡ್-19ನ ಎಲ್ಲ ಕೋವಿಡ್ ಮಾರ್ಗಸೂಚಿಗನುಗುಣವಾಗಿ ಮತ ಎಣಿಕೆ ಗುರುವಾರ ಆರಂಭವಾಗಿದೆ. 16 ಜಿಲ್ಲೆಗಳ 41 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
ಮಣಿಪುರ ಮುಖ್ಯ ಚುನಾವಣಾ ಅಧಿಕಾರಿ ರಾಜೇಶ್ ಅಗರ್‌ವಾಲ್ ಮಾತನಾಡಿ, ‘ಎಲ್ಲ 16 ಜಿಲ್ಲೆಗಳಲ್ಲಿಯೂ ಮತ ಎಣಿಕೆ ಆರಂಭವಾಗಿದೆ. ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆದಿದೆ. ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೋವಿಡ್ ನಿಯಮಾವಳಿ ಪಾಲನೆ ದೃಷ್ಟಿಯಿಂದ ಮತ ಎಣಿಕೆ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಫೆ. 28 ಮತ್ತು ಮಾರ್ಚ್ 5 ರಂದು ನಡೆದ ಎರಡು ಹಂತದ ಚುನಾವಣೆಯಲ್ಲಿ ಶೇ 89.3ರಷ್ಟು ಮತದಾನವಾಗಿತ್ತು. 2017 ಮತ್ತು 2012ರಲ್ಲಿ ಕ್ರಮವಾಗಿ ಶೇ 86.4 ಮತ್ತು ಶೇ 79.5ರಷ್ಟು ಮತದಾನವಾಗಿತ್ತು.
ವಿವಿಧ ರಾಜಕೀಯ ಪಕ್ಷಗಳ 17 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 265 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದಲ್ಲದೆ ಇನ್ನುಳಿದ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್‌ಗಳಲ್ಲೂ ಮತ ಎಣಿಕೆ ಆರಂಭವಾಗಿದೆ.ಹಲವು ಸುದ್ದಿ ಸಂಸ್ಥೆಗಳು, ಏಜೆನ್ಸಿಗಳು ಚುನಾವಣಾ ಸಮೀಕ್ಷಾ ಫಲಿತಾಂಶಗಳ ಪ್ರಕಾರ ಮಣಿಪುರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ. ರಾಜ್ಯದಲ್ಲಿ ಬಿಜೆಪಿ ಸರಳ ಬಹುಮತ ಗಳಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷಾ ವರದಿಗಳು ತಿಳಿಸಿವೆ.