ಇಂಫಾಲ್ : ಮಣಿಪುರದಲ್ಲಿ ಮಹಿಳೆಯರನ್ನ ಬೆತ್ತಲೆ ಮೆರವಣಿಗೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಹುಯಿರೆಮ್ ಹೆರಾದಾಸ್ ಸಿಂಗ್ ಮನೆಗೆ ಬೆಂಕಿ ಹಾಕಿ ಸುಟ್ಟುಹಾಕುವ ಮೂಲಕ ಪ್ರತಿಭಟನಾಕಾರರ ಗುಂಪು ಅಕ್ರೋಶ ವ್ಯಕ್ತಪಡಿಸಿದೆ.
ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಎರಡು ತಿಂಗಳ ಹಳೆಯ ವೀಡಿಯೊ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಕಳೆದ ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಕಾಂಗ್ ಪೋಕ್ಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿತ್ತು. ವಿಡೀಯೋ ವೈರಲ್ ಆದ ಬಳಿಕ ರೊಚ್ಚಿಗೆದ್ದ ಜನ ಪ್ರತಿಭಟನೆಗೆ ಮುಂದಾಗಿದ್ದರು.
ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಮಣಿಪುರದ ತೌಬಲ್ ಜಿಲ್ಲೆಯ ನಾಂಗ್ ಪೋಕ್ ಸೆಕ್ಮೈ ಪೊಲೀಸರು ಸಾಮುಹಿಕ ಅತ್ಯಾಚಾರ ಹಾಗೂ ಕೊಲೆ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಗುರುವಾರ ಸಂಜೆ ವೇಳೆಗೆ ನಾಲ್ವರನ್ನು ಬಂಧಿಸಲಾಗಿತ್ತು. ಆದರೂ ಪ್ರತಿಭಟನಾಕಾರರ ಆಕ್ರೋಶ ಮುಂದುವರೆದಿದ್ದು, ಶುಕ್ರವಾರವೂ ಹಿಂಸಾತ್ಮಕ ರೂಪ ತಾಳಿದೆ.
ಆಕ್ರೋಶಗೊಂಡ ಪ್ರತಿಭಟನಾಕಾರರ ಗುಂಪು ಪ್ರಮುಖ ಆರೋಪಿ ಮನೆಗೆ ಬೆಂಕಿ ಹಚ್ಚಿ ಸುಟ್ಟುಹಾಕಿದೆ.