ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಲಭೆಕೋರರಿಗೆ ಎಚ್ಚರಿಕೆ ನೀಡಿದ್ದಾರೆ.
ಈಶಾನ್ಯ ರಾಜ್ಯಕ್ಕೆ ತಮ್ಮ ನಾಲ್ಕು ದಿನಗಳ ಭೇಟಿಯ ಸಂದರ್ಭದಲ್ಲಿ ಸರಣಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸುವ ಯೋಜನೆಯ ಭಾಗವಾಗಿ ಹಿಂಸಾಚಾರದ ಕುರಿತು ತನಿಖೆಗೆ ಸಮಿತಿ ರಚಿಸುವುದಾಗಿ ಘೋಷಿಸಿದ್ದಾರೆ.
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಅಲ್ಲದೆ ರಾಜ್ಯಪಾಲರು ಮತ್ತು ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಹಾಗೂ ನಾಗರಿಕರನ್ನು ಒಳಗೊಂಡ ಶಾಂತಿ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದ ಆರು ಪ್ರಕರಣಗಳನ್ನು ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ತನಿಖೆ ನಡೆಸಲಿದೆ. “ಕೇಂದ್ರದ ಮಾರ್ಗದರ್ಶನದಲ್ಲಿ ಸಿಬಿಐ ತನಿಖೆ ನಡೆಸುತ್ತದೆ. ತನಿಖೆ ಪಾರದರ್ಶಕವಾಗಿರಲಿದೆ ಮತ್ತು ಹಿಂಸಾಚಾರದ ಹಿಂದಿನ ಮೂಲ ಕಾರಣಗಳನ್ನು ಪತ್ತೆಹಚ್ಚಲಿದೆ ಎಂದು ನಾನು ಎಲ್ಲರಿಗೂ ಭರವಸೆ ನೀಡುತ್ತೇನೆ ಎಂದರು.
ಇದೇ ವೇಳೆ ಭದ್ರತಾ ಸಿಬ್ಬಂದಿಯಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ಒಪ್ಪಿಸದಿದ್ದರೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.