ನವದೆಹಲಿ (New Delhi): ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಲುಕ್ ಔಟ್ ನೋಟಿಸ್(ಎಲ್‌ಒಸಿ) ಜಾರಿ ಮಾಡಿಲ್ಲವೆಂದು ಸಿಬಿಐ ಸ್ಪಷ್ಟಪಡಿಸಿದೆ.
ಅಲ್ಲದೆ, ಹಗರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಹೆಸರಿಸಲಾದ 13 ಜನರಲ್ಲಿ ಯಾರೊಬ್ಬರ ವಿರುದ್ಧವೂ ಎಲ್‌ಒಸಿ ಜಾರಿ ಮಾಡಿಲ್ಲವೆಂದು ಹೇಳಿದೆ.
ಪ್ರಕರಣದಲ್ಲಿ ಆರೋಪಿಯಾಗಿರುವವರು ಸಾರ್ವಜನಿಕ ವ್ಯಕ್ತಿಗಳು. ಅವರು ವಿದೇಶಕ್ಕೆ ತೆರಳಲು ಸರ್ಕಾರದ ಅನುಮತಿ ಇರುತ್ತದೆ. ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡುವ ಬಗ್ಗೆ ಯೋಚಿಸಿಲ್ಲ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಸಿಸೋಡಿಯಾ ಸೇರಿದಂತೆ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ 13 ಮಂದಿಗೆ ಎಲ್‌ಒಸಿ ಜಾರಿ ಮಾಡಲಾಗಿದೆ ಎಂದು ವರದಿಯಾಗಿತ್ತು.
ವರದಿ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಸಿಸೋಡಿಯಾ, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ನಾನು ದೆಹಲಿಯಲ್ಲಿ ಮುಕ್ತವಾಗಿ ಓಡಾಡುತ್ತಿದ್ದೇನೆ, ಎಲ್ಲಿಗೆ ಬರಬೇಕು ಹೇಳಿ ಮೋದಿ ಜೀ ಎಂದು ಸಿಸೋಡಿಯಾ ಸವಾಲು ಹಾಕಿದ್ದರು.
ನಮ್ಮ ಮೇಲೆ ನೀವು ಎಲ್ಲಾ ದಾಳಿಗಳನ್ನು ನಡೆಸಿದ್ದೀರಿ. ಆದರೆ, ನಮ್ಮ ಬಳಿ ಏನೂ ಪತ್ತೆಯಾಗಿಲ್ಲ. ಒಂದು ಪೈಸೆಯೂ ಹಣ ಸಿಕ್ಕಿಲ್ಲ. ಈಗ ಮನೀಶ್ ಸಿಸೋಡಿಯಾ ಸಿಗುತ್ತಿಲ್ಲ ಎಂದು ನನಗೆ ಲುಕ್ ಔಟ್ ನೋಟಿಸ್ ನೀಡಿದ್ದೀರಿ. ಇದೇನು ಗಿಮಿಕ್, ಮೋದಿ ಜೀ ಎಂದು ಪ್ರಶ್ನಿಸಿದ್ದರು.