ಮನೆ ಅಪರಾಧ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

0

ಚಿಂತಾಮಣಿ: ತಾಲ್ಲೂಕಿನ ಕೆಂಪದೇನಹಳ್ಳಿ ಗ್ರಾಮದ ತೋಟದ ಬಾವಿಯೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವೊಂದು ಸೋಮವಾರ ಪತ್ತೆಯಾಗಿದೆ.
ಗ್ರಾಮದ ನಿವಾಸಿ ಬೀರಪ್ಪ ಎಂಬುವವರ ತೋಟದ ಬಾವಿಯಲ್ಲಿ ಸುಮಾರು ೩೦ ವರ್ಷದ ಕಟ್ಟುಮಸ್ತಾದ ಅಪರಿಚಿತ ಪುರುಷನ ಶವ ಕಂಡುಬಂದಿದೆ.
ಕೈ, ಕಾಲುಗಳನ್ನು ಹಗ್ಗದಿಂದ ಕಟ್ಟಿ ಜತೆಗೆ ಮೇಲೇಳದಂತೆ ದೊಡ್ಡ ಸೈಜು ಕಲ್ಲಿಗೆ ಕಟ್ಟಿ ಹಾಕಲಾಗಿದೆ.

ಬಾವಿಯಲ್ಲಿ ಹಾಕಿ ಸುಮಾರು ೪-೫ ದಿನಗಳಾಗಿರಬಹುದು. ಶವ ತುಂಬಾ ಕೊಳೆತ ಸ್ಥಿತಿಯಲ್ಲಿದೆ ಬಾವಿಯ ಅಕ್ಕಪಕ್ಕದಲ್ಲಿ ಮದ್ಯಯದ ಬಾಟಲಿಗಳು ಪತ್ತೆಯಾಗಿವೆ. ಕೊಲೆ ಮಾಡಿ ಶವ ಮೇಲೇಳದಂತೆ ಕಟ್ಟಿಹಾಕಿ ಬಾವಿಯೊಳಕ್ಕೆ ಹಾಕಿರುವ ಅನುಮಾನ ವ್ಯಕ್ತವಾಗಿದೆ. ಬಾವಿಯ ಮಾಲೀಕರು ಶವವನ್ನು ಕಂಡ ಕೂಡಲೇ ಗ್ರಾಮದ ಮುಖಂಡರಿಗೆ ತಿಳಿಸಿದ್ದಾರೆ. ಗ್ರಾಮಸ್ಥರು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಎಸ್ಪಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಮುರಳೀಧರ್, ಗ್ರಾಮಾಂತರ ಠಾಣೆ ಪ್ರಭಾರಿ ಇನ್ಸ್ ಸ್ಪೆಕ್ಟರ್ ವಿಜಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು. ಶವ ತುಂಬಾ ಕೊಳೆತುಹೋಗಿರುವುದರಿಂದ ಮರಣೋತ್ತರ ಪರೀಕ್ಷೆಗೆ ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.