ಮಳೆ ಮೋಹ, ಸಂಗೀತದ ಸೆಳೆತ ಮತ್ತು ದುರಂತ. ಇವು ಮಾನ್ಸೂನ್ ರಾಗ ಚಿತ್ರದ ಗಟ್ಟಿ ಕಂಟೆಂಟ್ಗಳು. ಮಳೆ ಇಲ್ಲಿ ಪ್ರೀತಿ ಹುಟ್ಟಿಸುತ್ತದೆ. ರಾಗ ಹೃದಯದಲ್ಲಿ ಹೊಸ ಅಲೆ ಮೂಡಿಸುತ್ತದೆ. ಚಿತ್ರದ ಪ್ರತಿ ಫ್ರೇಮ್ ದೃಶ್ಯ ಕಾವ್ಯದ ಅನುಭವವೇ ಸರಿ.
ಪಾತ್ರಗಳ ಓಟ, ಕಲಾವಿದರ ತೊಡಗಿಸಿಕೊಳ್ಳುವಿಕೆ, ಆ ದಿನಗಳನ್ನ ಕಟ್ಟಿಕೊಡುವ ಪರಿ ಎಲ್ಲವೂ ಸೂಪರ್. ಸದಾ ಮಳೆ ಸುರಿಯೋ ಊರಿನ ದೃಶ್ಯ ಇಲ್ಲಿ ಮನಮೋಹಕ, ಪ್ರತಿ ದೃಶ್ಯದಲ್ಲೂ ಇಲ್ಲಿ ಮಳೆ ಹಾಜರು, ಕೊಡೆ, ಕಂದಿಲು, ಸೈಕಲ್ಲು, ಸಮುದ್ರದ ಅಲೆ, ಎಲ್ಲವೂ ಇಲ್ಲಿ ಪ್ಲಸ್, ಕಥೆ ಹೇಳಿದ ರೀತಿ ಸೂಪರ್, ಅದನ್ನ ಅನುಭವಿಸಿದ ಎಲ್ಲ ಕಲಾವಿದರೂ ಇಲ್ಲಿ ಒಳ್ಳೆ ಮಾರ್ಕ್ಸ್ ಕೊಡಲೇಬೇಕು. ಒಂದೇ ಟಿಕೆಟ್ ನಲ್ಲಿ ನಾಲ್ಕು ಕಥೆಗಳನ್ನ ನೋಡಿದ ಅನುಭವ ಪ್ರೇಕ್ಷಕರಿಗೆ ಕಂಡಿತಾ ಇಲ್ಲಿ ಆಗುತ್ತದೆ.
ಮಾನ್ಸೂನ್ ರಾಗ ಸಿನಿಮಾದಲ್ಲಿ ಮೇಲೆ ಹೇಳಿದ ಎಲ್ಲ ಅಂಶಗಳೂ ಇವೆ. ಇವುಗಳನ್ನ ಹೊರತು ಪಡಿಸಿದರೆ ಇಲ್ಲಿ ಸಾಕಷ್ಟು ಮೈನಸ್ ಗಳೂ ಕಂಡು ಬರುತ್ತವೆ.
ಚಿತ್ರದಲ್ಲಿ ಕಟ್ಟೆ ಅನ್ನೋದು ದಾಲಿ ಧನಂಜಯ್ ನಿರ್ವಹಿಸಿದ ಪಾತ್ರವೇ ಆಗಿದೆ. ಸರಾಯಿ ಅಂಗಡಿಯಲ್ಲಿ ಕೆಲಸ ಮಾಡೋ ಒಬ್ಬ ಡಿಫರಂಟ್ ಮ್ಯಾನ್. ಇಲ್ಲಿ ಸರಾಯಿ ತೆಗೆದುಕೊಳ್ಳಲು ಬರೋ ಆಸ್ಮಾನೇ ಈ ಡಿಫರಂಟ್ ಮ್ಯಾನ್ ಲವರ್. ಇದು ಈ ಒಂದು ಕಥೆ ಟ್ರ್ಯಾಕ್.
ಇಲ್ಲಿ ಒಂದಲ್ಲ ಎರಡಲ್ಲ ಹೆಚ್ಚು ಕಡಿಮೆ ನಾಲ್ಕು ಲವ್ ಸ್ಟೋರಿಗಳು ಬರುತ್ತವೆ. ಎಲ್ಲ ಕಥೆಗಳಲ್ಲೂ ವಿಭಿನ್ನತೆ ಇದೆ. ವಿಭಿನ್ನ ಪ್ರೀತಿಯ ಸೆಳೆತವೂ ಇದೆ. ಇದನ್ನ ಗಮನಿಸ್ತಾ ಹೋದ್ರೆ, ಪ್ರೀತಿಯ ಅಲೆ ನಿಮ್ಮ ಎದೆಯನ್ನ ತಟ್ಟಿ ಬಿಡುತ್ತದೆ. ಅನೂಪ್ ಸಿಳೀನ್ ಸಂಗೀತ ಆ ಒಂದು ಪ್ರೀತಿಯನ್ನ ನಿಮ್ಮ ಹೃಯದಕ್ಕೆ ಟಚ್ ಮಾಡಲು ಸಾಧನವೇ ಆಗಿದೆ.
ಪ್ರೀತಿ ಪ್ರೇಮ ಅಂತ ಓಡಾಡೋ ಹುಡುಗ-ಹುಡುಗಿಯರಿಗೆ ಇಲ್ಲಿ ಶಾಲೆಯಲ್ಲಿ ಆಗೋ ಕ್ರಶ್ ಕತೆನೂ ಇದೆ. ಇದು ಒಂದೊಮ್ಮೆ ನಿಮ್ಮನ್ನ ನಿಮ್ಮ ಬಾಲ್ಯಕ್ಕೂ ಕೊಂಡೊಯ್ಯಬಹುದು. ಇದು ಬೇಡ ಅನಿಸಿದ್ರೆ, ಕ್ರಿಶ್ಚಿಯನ್ ಉಡಾಳ ಹುಡುಗ ಮತ್ತು ಬ್ರಾಹ್ಮಣರ ಹುಡುಗಿಯ ಲವ್ ಇಷ್ಟ ಆಗಬಹುದು.
ಸರ್ಕಾರಿ ಕಚೇರಿಯಲ್ಲೂ ಒಂದ್ ಲವ್ ಸ್ಟೋರಿ ಇದೆ. ಇದು ಸುಹಾಸಿನಿ ಮತ್ತು ಅಚ್ಚುತ್ ಕುಮಾರ್ ಅವರ ಕಥೆಯನ್ನೆ ಹೇಳುತ್ತದೆ. ಇದು ಒಂದ್ ರೀತಿ ಓಲ್ಡ್ ಏಜ್ ಲವ್ ಅಂದ್ರೂ ತಪ್ಪಿಲ್ಲ ಬಿಡಿ. ಇಂತಹ ಲವ್ ಸ್ಟೋರಿಯಲ್ಲಿ ಎಲ್ಲರೂ ಇಷ್ಟ ಆಗುತ್ತಾರೆ.
ಹೌದು, ಇಡೀ ಸಿನಿಮಾ ನೋಡಿದಾಗ ಈ ಭಾವನೆ ಕಂಡಿತಾ ಬರುತ್ತದೆ. ತುಂಬಾ ಚೆನ್ನಾಗಿಯೇ ಹೋಗುವ ಪ್ರತಿ ಪ್ರೇಮ ಕಥೆಗೂ ಒಂದು ಅಂತ್ಯ ಇದೆ. ಆ ಅಂತ್ಯ ದುರಂತ ಅನ್ನೋದು ಬಿಟ್ರೆ, ಅದು ಮನಸ್ಸಿನಲ್ಲಿ ಹಾಗೆ ಉಳಿಯುತ್ತದೆ. ಆದರೆ ಇಡೀ ಸಿನಿಮಾದ ಅಂತ್ಯ ಹೇಳೋವಲ್ಲಿ ನಿರ್ಧರಿಸಿದ ಐಡಿಯಾ ಯಾಕೋ ಕನ್ವೆನ್ಸಿಂಗ್ ಆಗಿಯೇ ಇಲ್ಲ.
ಅಚ್ಚುತ್ ಕುಮಾರ್ ಅವರ ದೃಶ್ಯದಿಂದಲೇ ಸಿನಿಮಾ ಶುರು ಆಗುತ್ತದೆ. ಒಬ್ಬ ಪೋಷಕ ನಟನಿಂದ ಒಂದು ದೊಡ್ಡ ಸಿನಿಮಾ ಓಪನ್ ಆಗುತ್ತದೆ ಅಂದ್ರೆ, ಒಳ್ಳೆ ಪ್ರಯೋಗ ಅನಿಸುತ್ತದೆ. ಒಟ್ಟು ಐದು ಕಥೆಗಳಲ್ಲಿ ಅಚ್ಚುತ್ ಕುಮಾರ್ ಹಾಗೂ ಸುಹಾಸಿನಿ ಲವ್ ಸ್ಟೋರಿನೂ ಒಂದು ಅನಿಸುತ್ತಲೇ ಸಾಗುತ್ತದೆ. ಆದರೆ ಅಂತ್ಯದಲ್ಲಿ ಡೈರೆಕ್ಟರ್ ರವೀಂದ್ರನಾಥ್ ಮಾಡಿರೋ ಪ್ರಯೋಗ ಯಾಕೋ ಒಪ್ಪಿಕೊಳ್ಳಲು ಆಗೋದೇ ಇಲ್ಲ.
ಸೀರಿಯಸ್ ಸಿನಿಮಾವೊಂದಕ್ಕೆ ಇಂತಹ ಎಂಡಿಗ್ ಬೇಕಿತ್ತೇ ಅನ್ನೋ ಅಭಿಪ್ರಾಯವೂ ಮೂಡುತ್ತದೆ. ಒಂದ್ ಅರೆಕ್ಷಣ ವಿಚಾರ ಮಾಡಿದ್ರೆ, ಚಿತ್ರದ ಒಟ್ಟು ಅಂತ್ಯವನ್ನ ನೀವೇ ಗೆಸ್ ಮಾಡಿ ಬಿಡಿ ಅಂತಲೂ ನಿರ್ದೇಶಕರು ಪ್ರೇಕ್ಷಕರ ಮೇಲೆ ಬಿಟ್ಟಂತೇನೂ ಕಾಣುತ್ತದೆ. ಒಂದೇ ಲೈನ್ ನಲ್ಲಿ ಹೇಳೋದಾದ್ರೆ, ಮಾನ್ಸೂನ್ ರಾಗ ಒಂದು ದೃಶ್ಯ ಕಾವ್ಯ ಅಂದ್ರೂ ತಪ್ಪಿಲ್ಲ.