ಬ್ರಹ್ಮಾಸ್ತ್ರವು ನಿಶಕ್ತಗೊಂಡರು ದಾರುಕನ ಅಟ್ಟಹಾಸವು ನಿಲ್ಲಲಿಲ್ಲ. ಬ್ರಹ್ಮದೇವನ ವರಬಲ-ಮಂತ್ರದಿಂದ ಕೋಟಿ ದಾರುಕಾಸುರರಾಗಿ ಸಂಗ್ರಾಮ ಮಾಡುತ್ತಿದ್ದರು. ರಣರಂಗದಲ್ಲಿ ಭದ್ರಕಾಳಿ ಅಸಹಾಯಕತೆಯನ್ನು ದೇವರ್ಷಿ ನಾರದರ ಮುಖಾಂತರ ತಿಳಿದ ಪಾರ್ವತಿಯು ಕಾಳಿಯನ್ನು ಸಮೀಪಿಸಿ “ಮಗಳೇ, ನೀನು ವ್ಯಸನಪಡಬೇಡ. ಬ್ರಹ್ಮದೇವನಿಂದ ಉಪದೇಶಿತವಾದ ʼಮಾಯಾವತಿʼ ಮತ್ತು ʼತಾಮಸಿʼ ಎಂಬೆರಡು ಮಂತ್ರೋಚ್ಛಾರಣೆಗಳಿಂದ ದಾರುಕನು ಅಜೇಯನಾಗಿರುಗಿರುವನು. ಆದರೆ ಆ ಮಂತ್ರಗಳನ್ನು ಆತನು ತನ್ನಲ್ಲಿರಿಸಿಕೊಳ್ಳದೆ ಪತ್ನಿ ಮನೋದರಿಗೆ ಉಪದೇಶಿಸಿರುತ್ತಾನೆ. ಅವಳಿಗೀಗ ವ್ರತನಿಷ್ಠಳಾಗಿ ಮಂತ್ರೋಚ್ಛಾರಣೆಯಲ್ಲಿದ್ದಾಳೆ. ತನಗೆ ಉಪಾದೇಶಿತವಾದ ಮಂತ್ರವನ್ನು ಬ್ರಹ್ಮಸಮ್ಮತವಿಲ್ಲದೆ ಅನ್ಯರಿಗೆ ಉಪದೇಶಿಸಿರುವುದು ವಚನದ ಉಲ್ಲಂಘನೆಯಾಗಿದೆ. ತಾನು ವಿಪ್ರಕನ್ಯೆಯಾಗಿ ಮನೋದರಿಯಲ್ಲಿಗೆ ತೆರಳಿ ಆ ಮಂತ್ರಗಳನ್ನ ದಾನವಾಗಿ ಪಡೆದು ಬರುತ್ತೇನೆ. ನಂತರ ಆ ಮಂತ್ರಗಳು ಸಹಕಾರಿಯಾಗಲಾರವು. ಆ ತನಕ ನೀನಿಲ್ಲೇ ಇರು” ಎಂದರುಹಿದಳು.
ರಣರಂಗದಲ್ಲಿ ಸೆಣಸಾಡುತ್ತಿರುವ ಪತಿಯ ಯಶಸ್ವಿಗಾಗಿ ಅಂತಃಪುರದಲ್ಲಿ ವ್ರತೋಪಾಸನೆಯಲ್ಲಿದ್ದ ಮನೋದರಿಯು ಸುಲಕ್ಷಣೆಯಾಗಿರುವ ವಿಪ್ರಕನ್ಯೆಯನ್ನು ಕಂಡು ಆಶ್ಚರ್ಯವಾದರೂ ಇದೊಂದು ಶುಭಸೂಚಕವೆಂದು ಗ್ರಹಿಸಿ ʼಏನು ಬೇಕು?ʼ ಎಂದು ಕೇಳಿದಳು. ಕನ್ಯೆಯು “ಮಹಾರಾಣಿ, ನಾನು ರಕ್ಕಸಕುಲದ ಇಷ್ಟ ದೇವತೆ, ನಿನ್ನ ಗಂಡನು ಯುದ್ಧ ರಂಗದಲ್ಲಿ ಸೋಲಿನಂಚಿನಲ್ಲಿ ಇದ್ದಾನೆ. ಒಬ್ಬರೇ ಒಂದು ಮಂತ್ರವನ್ನು ಅನೇಕ ದಿನಗಳ ಕಾಲ ಜಪಿಸಿದರೆ ಅದರ ಶಕ್ತಿಯು ಕಡಿಮೆಯಾಗುವುದು. ಆದುದರಿಂದ, ನೀನು ಈಗ ಜಪಿಸುತ್ತಿರುವ ಮಂತ್ರಗಳೆರಡನ್ನು ನನಗೆ ದಾನವಾಗಿ ಉಪದೇಶಿಸಿ ನೀಡಬೇಕು. ಕೆಲವು ದಿನಗಳ ಕಾಲ ನಾನು ಜಪಿಸುತ್ತಿದ್ದರೆ ಮಂತ್ರಶಕ್ತಿಯಿಂದ ನಿನ್ನ ಗಂಡನು ಜಯಶಾಲಿಯಾಗಿ ಬರುತ್ತಾನೆ. ತಡ ಮಾಡಿದರೆ ಆತನ ಜೀವಕ್ಕೆ ಹಾನಿಯಿದೆ” ಎಂದು ತನ್ನ ಶಕ್ತಿಯಿಂದ ಮೋಹಕಗೊಳಿಸಿದಳು. ಪಾಪ ! ಮನೋದರಿಯು ಯೋಚಿಸದೆ ಪತಿಯ ಗೆಲುವಿಗಾಗಿ ವಿಧಿ-ಪ್ರಕಾರವಾಗಿ ಮಂತ್ರಗಳನ್ನು ದಾನವಾಗಿ ನೀಡಿದ ವಿಪ್ರಕನ್ಯೆಯು ಮಾಯವಾದಳು. ಆಕೆಯು ಕಾಳಿಯಲ್ಲಿ ಆಗಮಿಸಿ ವಿವರವನ್ನು ತಿಳಿಸಿ, ಪುನರಪಿ ಕಾಳಗಕ್ಕಾಗಿ ಸಪ್ತಮಾತೃಕೆಯರನ್ನು ಪ್ರೇರಿಸಿ ಕಳುಹಿಸಿದಳು.
ಮಂತ್ರದಾನ ಮಾಡಿರುವಂತಹ ವಿವರವನ್ನು ರಾಣಿಯಿಂದ ತಿಳಿದ ದಾರುಕನು ಹೌಹಾರಿದನು. ಅತಿವವಾದ ರೋಷವನ್ನು ತಾಳಿದನು. ಸಪ್ತಮಾತೃಕೆಯರನ್ನು, ದೇವತೆಗಳನ್ನು ನಿರ್ನಾಮ ಮಾಡಿಯೇ ಬರುತ್ತೇನೆ ಎಂದು ಪ್ರತಿಜ್ಞಾಬದ್ಧನಾಗಿ ರಣರಂಗಕ ಆಗಮಿಸಿದನು. ಆತನು ಮಹಾಕಾಳಿಯ ರೌದ್ರವತಾರವನ್ನು ಕಂಡುಬೆರಗಾದನು. ಅವನಲ್ಲಿ ಭಕ್ತಿ ಭಾವವು ಮೂಡಿತು. ಅವನು ʼಅಮ್ಮಾʼ ಎಂದು ಕೈಜೋಡಿಸಿದನು. ಭದ್ರಕಾಳಿಯ ಮಾತೃಹೃದಯವು ಅನುಕಂಪತಿಸಿತು. ಇದನ್ನು ಕಂಡಂತಹ ದೇವತೆಗಳು ಹೆದರಿದರು. ಅವರು ಮಹಾಕಾಳಿಯನ್ನು ಹಾಡಿ ಹೊಗಳಿದರು. ದಾರುಕನು ದ್ರೋಹವರಸಗಿದ ರೀತಿಯನ್ನು ನೆನಪು ಮಾಡಿದನು. ಜಗಜ್ಜನನಿಯಾದ ಪಾರ್ವತಿಯೂ ಕಾಳಿಯನ್ನು ಹುರಿದುಂಬಿಸಿದಳು. ಶಿವಮಹಾದೇವನು ಕಾಳಿಯೊಡನೆ ರಣರಂಗಕ್ಕೆ ಆದಿಬೇತಾಳನನ್ನೂ ಕೂಡಿಕೊಂಡು ಹೋಗಲು ತಿಳಿಸಿದಳು.
ಬೇತಾಳ ವೃತ್ತಾoತ :-
ಹಿಂದೊಮ್ಮೆ ದೇವಾಸುರರಿಗೆ ಘನಘೋರ ಸಂಗ್ರಾಮ ನಡೆಯಿತು. ಸೋತಂತಹ ದೇವತೆಗಳು, ರಕ್ಷಣೆಗಾಗಿ ಬಂದ ಮಹಾವಿಷ್ಣು ತನ್ನ ಶಾರ್ಙ್ಗರ ಧನುಸ್ಸಿನಿಂದ ಬಾಣಗಳ ಮಳೆಯನ್ನು ಸುರಿಸಿದನು. ರಕ್ಕಸರು ಕೈಕಾಲು ತುಂಡಾಗಿ, ಹೊಟ್ಟೆ ಹೋಳಾಗಿ, ರಣರಂಗದಲ್ಲಿ ಬಿದ್ದರು. ಆದರೆ ಅಮೃತಪಾನದಿಂದಾಗಿ ಅವರ ಜೀವ ಹೋಗುತ್ತಿರಲಿಲ್ಲ. ಅಂತವುಗಳ ದೇಹದಿಂದ ಸುರಿಯುತ್ತಿರುವ ರಕ್ತವು ಹೊಳೆಯಾಗಿ ಹರಿದು ಕಡಲಿನಂತಾಯಿತು. ಋಷಿಮುನಿಗಳ ಆಶ್ರಮಕ್ಕೂ ನೆತ್ತರ ಹೊಳೆ ಹರಿಯಿತು. ಹೋಮಕುಂಡಗಳೆಲ್ಲ ರಕ್ತದಿಂದ ಮುಳುಗಿ ನಂದಿದವು. ಹರಿದು ಬರುತ್ತಿರುವ ರಕ್ತ ಪ್ರವಾಹವನ್ನು ನಿಲ್ಲಿಸಲು ದೇವತೆಗಳಿಂದ ಆಗಲಿಲ್ಲ. ಆಗ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಒಟ್ಟುಗೂಡಿ, ಯೋಚಿಸಿ, ಕಾನನದಲ್ಲಿರುವ ಪಿಶಾಚಿಗಳನ್ನೆಲ್ಲ ಕರೆಸಿದರು. ಕೈಲಾಸದ ಭೂತಗಣಗಳೆಲ್ಲಾ ಬಂದವು. ಅವುಗಳಿಗೆಲ್ಲ ರಕ್ತವನ್ನು ಕುಡಿಯಲು ಆದೇಶಿಸಿದಂತೆ ಬೇಕಾದಷ್ಟು ರಕ್ತವನ್ನು ಆ ಜಂತುಗಳು ಸುಮಾರು ಕಾಲ ಕೂಡಿದರೂ ರಕ್ತಪ್ರವಾಹ ಇಳಿಯಲಿಲ್ಲ. ತ್ರಿಮೂರ್ತಿಗಳು ಪುನಃಚಿಂತಿಸಿ ತಮ್ಮ ಮೂವರ ಶಕ್ತಿಯಿಂದ ಅತಿ ಭೀಕರಾಕರಾದ ಒಂದು ಮಹಾಪಿಶಾಚಿಯನ್ನು ಸೃಷ್ಟಿಸಿದರು. ಅದಕ್ಕೆ ʼಆದಿ ಕೈಲಾಸ ಬೇತಾಳʼನೆಂದು ಕರೆದರು. ಆ ಬೇತಾಳವು ಒಡೋಡಿ ರಕ್ತಸಮುದ್ರವನೆಲ್ಲಾ ಕುಡಿದು ಬತ್ತಿಸಿತು. ತ್ರಿಮೂರ್ತಿಗಳೊಡನೆ “ನನಗೆ ತಿಂದು ಕುಡಿದದ್ದು ಸಾಕಾಗಲಿಲ್ಲ. ಹಸಿವೆಯನ್ನು ತಾಳಲಾಗುವುದಿಲ್ಲ” ಎಂದು ದೊಡ್ಡ ಬಾಯನ್ನು ತಿಳಿದು ದೇವತೆಗಳನ್ನು ನುಂಗಲು ಹಣೆಯಾದನು. ಆಗ ತ್ರಿಮೂರ್ತಿಗಳು “ಮಗನೇ, ಈಗ ಸಾಕು ಇನ್ನೊಂದು ದೇವಾಸುರಾರ ಯುದ್ಧವಾಗುವಾಗ ನಿನಗೆ ಬೇಕಾಗುವಷ್ಟು ರಕ್ತ ಮಾಂಸಗಳು ಲಭಿಸಲಿಕ್ಕಿದೆ. ಆ ತನಕ ನೀನು ಮೇರುಪರ್ವತದಲ್ಲಿರುವ ʼವಸಂತʼ ಎಂಬ ಘೋರಾರಣ್ಯದಲ್ಲಿ ವಾಸವಾಗಿರು. ಆ ಕಾಡಿನಲ್ಲಿರುವ ಕ್ರೂರಮೃಗಗಳನ್ನು ತಿಂದು ಜೀವಿಸು”. ಎಂದು ಸಮಾಧಾನ ಪಡಿಸಿದಾಗ ಬೇತಾಳವು ವಸಂತವನಕ್ಕೆ ತೆರಳಿತು.
ಬೇತಾಳನು ಅಲ್ಲಿಯ ಮಹಾದಾಟದಲ್ಲಿ ನೀಡುತ್ತಿದ್ದನು ಕೇಪಳ, ದಾಸವಾಳ, ಸಂಪಿಗೆ, ಮೊದಲಾದ ಪುಷ್ಪಗಳಿರುವ ಮರಗಳನ್ನೇ ತಲೆಗೆ ಹೂವಾಗಿ ಮುಡಿಯುತ್ತಿದ್ದನು. ನೀಲಬಣ್ಣದ ಉಡುಪುವನ್ನು ಧರಿಸುತ್ತಿದ್ದನು. ಎರಡೆರಡು ಆನೆಗಳಂತೆ ಪೋಣಿಸಿದ ಮಾಲೆಯನ್ನು ಧರಿಸುತ್ತಿದ್ದನು. ಬೃಹತ್ತಾದ ಹೆಬ್ಬಾವಿಗೆ ಆನೆಗಳನ್ನ ಪೋಣಿಸಿದ ಉಡುದಾರವನ್ನೇ ಸೊಂಟಕ್ಕೆ ಸುತ್ತುತ್ತಿದ್ದನು. ಎರಡೆರಡು ಬಿಳಿಯಾನೆಗಳನ್ನು ಕುಂಡಲಗಳಾಗಿ ಕಿವಿಗೆ ನೇತಾಡಿಸುತ್ತಿದ್ದನು. ಅತಿ ದೊಡ್ಡ ಆನೆಯನ್ನು ನೆತ್ತಿಗೆ ಬೋಟ್ಟಾಗಿ ಇಡುತ್ತಿದ್ದನು. ಈ ರೀತಿಯಾಗಿ ಬೇತಾಳನು ವಸಂತವನದಲ್ಲಿ ನೆಲೆಗೊಂಡಿದ್ದನು.
ಶಿವನು ತಿಳಿಸಿದಂತೆ ಭದ್ರಕಾಳಿಯೂ ಬೇತಾಳವನ್ನು ಕರಕೊಂಡು ಹೋಗಲು ವಸಂತವನಕ್ಕೆ ಬಂದ ಸಮಯದಲ್ಲಿ ಬೇತಾಳನು ಉದಯ ಪರ್ವತದ ತುತ್ತ ತುದಿಯಲ್ಲಿ ಶಿರವನ್ನು, ಅಸ್ತಮಾನ ಪರ್ವತದ ತುದಿಯಲ್ಲಿ ಕಾಲನ್ನು, ಮಂದಾರ ಪರ್ವತದ ತುದಿಯಲ್ಲಿ ನಡುವನ್ನು, ಶ್ರೀ ಕಾಲಕೂಟ ಪರ್ವತದ ತುದಿಗಳಲ್ಲಿ ಕೈಗಳನ್ನೂ ಇಟ್ಟು ವಿಶ್ರಮಿಸುತ್ತಿದ್ದನು.
ಭದ್ರಕಾಳಿಯೂ ಬೇತಾಳನನ್ನು ಕರೆದಾಗ ಯಾರೆಂದು ಬೊಬ್ಬಿರಿದು ಕೇಳಿದನು ತಾನು ಪರಮೇಶ್ವರನ ಹಣೆಗಣ್ಣಿನಿಂದ ಹುಟ್ಟಿದ ಭದ್ರಕಾಳಿ ಎಂದು ತಿಳಿಸಿದಾಗ, ಮೇಲೆದ್ದು ಆತನು ತನಗೆ ತಿನ್ನಲು ಏನು ತಂದಿರುವೆ ಎಂದು ಕೇಳಿದನು. ಭದ್ರಕಾಳಿಯೂ “ದಾರುಕನ ಕೋಟೆಯಲ್ಲಿ 20 ಕೋಟಿ ರಕ್ಕಸರ ಮಾಂಸವು, ದಾರೂಕನ ಹೊಟ್ಟೆ ಕರುಳು ತಯಾರಾಗಿದೆ. ಹೋಗುವ “ಎಂದು ಹೇಳಿದಳು. ಭದ್ರಕಾಳಿಯನ್ನು ಹೆಗಲಿಗೇರಿಸಿ ಕುಳ್ಳರಿಸಿಕೊಂಡು ಬೇತಾಳನು ಸಾವಿರ ಹರದಾರಿ ದೂರವನ್ನು ಆರು ಅಡಿಯಲ್ಲಿ ಕ್ರಮಿಸಿ ದಾರುಕ ಕೋಟೆಯನ್ನು ತಲುಪಿದನು.