ಬೆಂಗಳೂರು : ಚುನಾವಣಾ ಸಂದರ್ಭದಲ್ಲಿ ರಾಜ್ಯ ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ವಿಧಾನಸೌಧದಲ್ಲಿ ಸಚಿವರೊಂದಿಗೆ ಸಭೆ ಮುಕ್ತಾಯಗೊಂಡಿದ್ದು, ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಗ್ಯಾರಂಟಿಗಳ ಜಾರಿಗೆ ಸಿಎಂಗೆ ಪರಮಾಧಿಕಾರ ನೀಡಲಾಗಿದೆ.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಂಡು ನಾಳೆ(ಗುರುವಾರ) ಮಾರ್ಗಸೂಚಿ ಸಿದ್ದಪಡಿಸಿದ ನಂತರ ಶುಕ್ರವಾರ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ನಂತರ ಅಧಿಕೃತ ಘೋಷಣೆಗೆ ನಿರ್ಧಾರ ಮಾಡಲಾಗಿದೆ ಎಂದು ವರದಿಯಾಗಿದೆ.
ಸಚಿವರು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಮಾಧಿಕಾರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮುಖ್ಯ ಕಾರ್ಯದರ್ಶಿಯಿಂದ ಹೆಚ್ಚುವರಿ ಆರ್ಥಿಕ ಹೊರೆ ಬಗ್ಗೆ ಸಭೆಗೆ ವಿವರಣೆ ನೀಡಲಾಗಿದ್ದು, ಷರತ್ತು ಹಾಕುವ ಬಗ್ಗೆ ಸಚಿವರಿಂದ ಅಭಿಪ್ರಾಯ ವಿನಿಮಯ ಮಾಡಲಾಗಿದೆ.
ಐದು ಗ್ಯಾರಂಟಿಗಳನ್ನೂ ಜಾರಿ ಮಾಡುವುದು ಗ್ಯಾರಂಟಿ. ಸಂಪುಟ ಸಭೆಯಲ್ಲಿ ಎಲ್ಲದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಆರ್ಥಿಕ ಹೊರೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ ಸೇರಿ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.