ಮನೆ ಕಾನೂನು ಮುಂಬಡ್ತಿ ಪಡೆದು ವರ್ಗಾವಣೆಯಾದ ಅಧಿಕಾರಿಗಳಿಗೆ ಹಲವು ನಿಯಮ

ಮುಂಬಡ್ತಿ ಪಡೆದು ವರ್ಗಾವಣೆಯಾದ ಅಧಿಕಾರಿಗಳಿಗೆ ಹಲವು ನಿಯಮ

0

ಬೆಂಗಳೂರು: ಕರ್ನಾಟಕ ಪೊಲೀಸ್ ವರ್ಗಾವಣೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದ್ದು, ಮುಂಬಡ್ತಿ ಪಡೆದು ವರ್ಗಾವಣೆಯಾದ ಅಧಿಕಾರಿಗಳಿಗೆ ಹಲವು ನಿಯಮಗಳನ್ನು ಅನುಸರಿಸುವಂತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಆದೇಶಿಸಿದ್ದಾರೆ.

ಇದರಿಂದಾಗಿ ಇನ್ನು ಮುಂದೆ ಪ್ರಮೋಷನ್ ಪಡೆದ ಅಧಿಕಾರಿಗಳು ಪುನರ್ ಮನನ ತರಬೇತಿಗೆ ಹಾಜರಾಗುವುದು ಕಡ್ಡಾಯವಾಗಿದೆ.

ಒಂದು ತಿಂಗಳ ಕಾಲ ಈ ತರಬೇತಿ ಇರಲಿದೆ. ರಾಜ್ಯದ ಪೊಲೀಸ್ ತರಬೇತಿ ಘಟಕಗಳಲ್ಲಿ ತರಬೇತಿ ನೀಡಲಾಗುತ್ತದೆ. ಬಡ್ತಿ ಪಡೆದ ಎರಡು ವರ್ಷಗಳ ಅಂತರದಲ್ಲಿ ಈ ತರಬೇತಿ ಕಡ್ಡಾಯಗೊಳಿಸಲಾಗಿದೆ.

ಇನ್ನು ಮುಂದೆ ಕಮಿಷನರೇಟ್ ವ್ಯಾಪ್ತಿಯಲ್ಲಿ 10 ವರ್ಷಗಳಷ್ಟೇ ಕೆಲಸ ಮಾಡಲು ಅವಕಾಶವಿದೆ. ಡಿವೈಎಸ್​​ಪಿ ಹಾಗೂ ಇನ್ಸ್​​ಪೆಕ್ಟರ್ ಹಂತದ ಅಧಿಕಾರಿಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳ ಮೇಲೆ ಇಲಾಖಾ ತನಿಖಾ ಪ್ರಕರಣಗಳಿದ್ದರೆ ಮುಂಬಡ್ತಿ ನೀಡಲಾಗುವುದಿಲ್ಲ. ಒಮ್ಮೆ ಐದು ವರ್ಷ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆಲಸ ಮಾಡಿದರೆ ಉಳಿದ ಐದು ವರ್ಷ ಕೂಲಿಂಗ್ ಅವಧಿ (ಇತರೆ ಸೇವೆ) ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಂಗಳವಾರ ರಾತ್ರಿಯಷ್ಟೇ ಪೊಲೀಸ್​ ಇಲಾಖೆಯಲ್ಲಿ ಮೇಜರ್​ ಸರ್ಜರಿ ಮಾಡಲಾಗಿದ್ದು, 25 ಜನ ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತೆಯಾಗಿದ್ದ ಐಪಿಎಸ್​ ಅಧಿಕಾರಿ ರೇಣುಕಾ ಸುಕುಮಾರ್​ ಸೇರಿದಂತೆ 25 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

ಹುಬ್ಬಳ್ಳಿ ಧಾರವಾಡ ಸೇರಿದಂತೆ ಕೆಲವು ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ಮತ್ತು ಹೆಚ್ಚಿನ ಅಪರಾಧ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿತ್ತು. ಇದೀಗ, ಐಪಿಎಸ್​ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ಹೊಸ ಆದೇಶ ಹೊರಡಿಸಲಾಗಿದೆ.

ಹಿಂದಿನ ಲೇಖನಮೈಸೂರಲ್ಲಿ ಡೆಂಗ್ಯೂಗೆ ಮೊದಲ ಬಲಿ: ಆರೋಗ್ಯಾಧಿಕಾರಿ ಸಾವು
ಮುಂದಿನ ಲೇಖನಅಯೋಧ್ಯಾ ರಾಮಮಂದಿರ ಅರ್ಚಕರಿಗೆ ನೂತನ ವಸ್ತ್ರ ಸಂಹಿತೆ ಜಾರಿ