ಮುಂಬೈ(Mumbai): ಕಳೆದ ಎರಡು ವರ್ಷಗಳಲ್ಲಿ ದೇಶಾದ್ಯಂತ ಒಂದು ಶತಕೋಟಿ ಭಾರತೀಯರಿಗೆ ನೀಡಲಾದ ಕೋವಿಡ್ 19 ಲಸಿಕೆಗಳಿಂದ “ಹಲವು ಅಡ್ಡ ಪರಿಣಾಮ”ಗಳು ಬೀರುತ್ತಿರುವುದು ಸತ್ಯ ಎಂಬುದಾಗಿ ಸರ್ಕಾರದ ಎರಡು ಉನ್ನತ ಸಂಸ್ಥೆಗಳು ಒಪ್ಪಿಕೊಂಡಿರುವುದು ಆರ್’ಟಿಐ ನಲ್ಲಿ ಬಹಿರಂಗವಾಗಿದೆ ಎಂದು ವರದಿ ತಿಳಿಸಿದೆ.
ಪುಣೆಯ ಉದ್ಯಮಿ ಪ್ರಫುಲ್ ಸರ್ದಾ ಅವರು ಸಲ್ಲಿಸಿದ ಆರ್’ಟಿಐಗೆ ಪ್ರತ್ಯುತ್ತರ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಶೇಷನ್( ಸಿಡಿಎಸ್’ಸಿಒ) ಕೋವಿಡ್ 19 ಲಸಿಕೆಯ ಅಡ್ಡ ಪರಿಣಾಮ ಕುರಿತು ಕೇಳಿದ ಪ್ರಶ್ನೆಗೆ ಆರ್’ಟಿಐನಲ್ಲಿ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿರುವುದಾಗಿ ವರದಿ ವಿವರಿಸಿದೆ.
ಕೇಂದ್ರ ಸರ್ಕಾರ ಭಾರತದಲ್ಲಿ ಆಸ್ಟ್ರಾಜೆನಿಕಾ, ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ, ಪುಣೆಯ ಕೋವಿಶೀಲ್ಡ್, ಕೋವ್ಯಾಕ್ಸ್, ಸರ್ಕಾರಿ ಸ್ವಾಮಿತ್ವದ ಭಾರತ್ ಬಯೋ ಟೆಕ್ ಲಿಮಿಟೆಡ್, ಕೋವ್ಯಾಕ್ಸಿನ್, ಡಾ.ರೆಡ್ಡೀಸ್ ಲ್ಯಾಬೋರೇಟರಿ ಆಮದು ಮಾಡಿಕೊಂಡ ಸ್ಪುಟ್ನಿಕ್ ವಿ, ಬಯೋಲಾಜಿಕಲ್ ಇ.ಲಿಮಿಟೆಡ್ ನ ಕಾರ್ಬೆವ್ಯಾಕ್ಸ್ ನಂತರ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್, ಅಹಮದಾಬಾದ್ ನ ಝೈಕೋ-ಡಿ (12ರಿಂದ 17 ವರ್ಷದೊಳಗಿನ ಮಕ್ಕಳಿಗೆ) ಲಸಿಕೆ ನೀಡಲು ಅನುಮತಿ ನೀಡಿರುವುದಾಗಿ ಐಎಎನ್ ಎಸ್ ವರದಿ ಮಾಡಿದೆ.
ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳೇನು?
ಐಎಎನ್ ಎಸ್ ವರದಿ ಪ್ರಕಾರ, ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ನಂತರ ಇಂಜೆಕ್ಷನ್ ಚುಚ್ಚಿಸಿಕೊಂಡ ಭಾಗದಲ್ಲಿ ವಿಪರೀತ ನೋವು, ವಿವಿಧ ಕೆಂಪು ಕಲೆಗಳು, ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ರಕ್ತ ಹೆಪ್ಪುಗಟ್ಟುವುದು, ನಿರಂತರ ವಾಂತಿ, ನಿರಂತರ ಕಿಬ್ಬೊಟ್ಟೆ ನೋವು ಅಥವಾ ವಾಂತಿ ಅಥವಾ ವಾಂತಿ ಇಲ್ಲದೇ ವಿಪರೀತ ತಲೆನೋವು, ಉಸಿರಾಟ ತೊಂದರೆ, ಎದೆ ನೋವು, ಕೈಕಾಲುಗಳಲ್ಲಿ ನೋವು, ನರಗಳ ಊತ, ಕಣ್ಣುಗಳಲ್ಲಿ ನೋವು, ದೃಷ್ಟಿ ಮಸುಕಾಗುವುದು, ನಿಶ್ಯಕ್ತಿ, ಕಾಲುಗಳಿಗೆ ಪಾರ್ಶ್ವವಾಯು ಸಾಧ್ಯತೆ ಕಂಡುಬರುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.
ಕೋವ್ಯಾಕ್ಸ್ ಲಸಿಕೆಯ ಅಡ್ಡಪರಿಣಾಮ:
ಕೋವ್ಯಾಕ್ಸ್ ಲಸಿಕೆ ಕೂಡಾ ಕೋವಿಶೀಲ್ಡ್ ನಂತೆಯೇ ಅಡ್ಡ ಪರಿಣಾಮ ಬೀರುತ್ತದೆ. ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ವಿಪರೀತ ನೋವು, ಆಯಾಸ, ತಲೆನೋವು, ಜ್ವರ, ಸ್ನಾಯುಗಳ ನೋವು, ಕೀಲು ನೋವು, ವಾಂತಿ, ಶೀತ, ನಿಶ್ಯಕ್ತಿ, ತುರಿಕೆ, ಬೆನ್ನುನೋವು, ತಲೆಸುತ್ತು ಅಥವಾ ಅರೆ ಮಂಪರು ಪರಿಣಾಮ ಕಂಡುಬರಲಿದೆ ಎಂದು ಐಎಎನ್ ಎಸ್ ವರದಿ ಮಾಡಿದೆ.